ನವದೆಹಲಿ, ಅ.16(DaijiworldNews/AA): ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ನಯಾಬ್ ಸಿಂಗ್ ಸೈನಿ ಅವರು ಇಂದು ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ನಯಾಬ್ ಸಿಂಗ್ ಸೈನಿ ಅವರು ನಾಳೆ 2ನೇ ಬಾರಿಗೆ ಹರಿಯಾಣದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹರಿಯಾಣದ ಪಂಚಕುಲದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಮಾಜಿ ರಾಜ್ಯ ಸಚಿವ ಅನಿಲ್ ವಿಜ್ ಸೈನಿ ನಯಾಬ್ ಸಿಂಗ್ ಸೈನಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಈ ವೇಳೆ ನಯಾಬ್ ಸಿಂಗ್ ಸೈನಿ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, ಹರಿಯಾಣ ದೇಶದ ರಾಜಕೀಯ ಪಂಡಿತರನ್ನು ತಪ್ಪು ಎಂದು ಸಾಬೀತುಪಡಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಈ ಮೂಲಕ ಸತತ ೩ನೇ ಬಾರಿಗೆ ಹರಿಯಾಣದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲಿದೆ ಎಂದರು.
ಈ ವೇಳೆ ಮಾತನಾಡಿದ ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಯಾಬ್ ಸಿಂಗ್ ಸೈನಿ ಅವರು, ಹರಿಯಾಣದ ಜನರು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಲ್ಲಿ ನಂಬಿಕೆ ಇಟ್ಟು 3ನೇ ಬಾರಿಗೆ ಬಿಜೆಪಿ ಸರ್ಕಾರವನ್ನು ರಚಿಸಿದ್ದಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನಕ್ಕೆ ಬಲ ಸಿಕ್ಕಂತಾಗಿದೆ ಎಂದು ತಿಳಿಸಿದರು.