ಬೆಂಗಳೂರು, ಅ.17(DaijiworldNews/AK):ಸಿದ್ದರಾಮಯ್ಯನವರು ಮಹರ್ಷಿ ವಾಲ್ಮೀಕಿ ಜಯಂತಿಯ ಉತ್ತಮ ದಿನದಂದು ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮನವಿ ಮಾಡಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಜ್ ಶೀಟ್ ಸಿದ್ದರಾಮಯ್ಯನವರಿಗೆ ಜ್ಞಾನೋದಯಕ್ಕೆ ಒಂದು ದಾಖಲೆಯಂತಿದೆ ಎಂದು ಭಾವಿಸುವುದಾಗಿ ಹೇಳಿದರು. ಜಸ್ಟಿಸ್ ಗಜಾನನ ಭಟ್ ಅವರು ಕೊಟ್ಟ ಚಾರ್ಜ್ ಶೀಟ್ ಪ್ರತಿಯನ್ನು ಪ್ರದರ್ಶನ ಮಾಡಿದ ಅವರು, ಯಾರೇ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂಬುದನ್ನು ನ್ಯಾಯಾಂಗದ ತೀರ್ಪಿನ ಮುಖಾಂತರ ಬೈಲ್ ಅಪ್ಲಿಕೇಶನ್ ಆರ್ಡರ್ನಲ್ಲಿ ತೋರಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರೇ ಇದು ಬಹಳ ಚೆನ್ನಾಗಿದೆ. ಮಧ್ಯಾಹ್ನದ ವರೆಗೆ ಓದಿ; ವಾಲ್ಮೀಕಿ ಜಯಂತಿಯ ದಿನ ಸಾಯಂಕಾಲ ರಾಜೀನಾಮೆ ಕೊಡಿ. ಆ ಮೂಲಕ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿ ಎಂದು ಒತ್ತಾಯಿಸಿದರು.
ಇ.ಡಿ. ಚಾರ್ಜ್ ಶೀಟಿನಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿಂದ ಕಾರು ಖರೀದಿ, ಕುಟುಂಬದ ವಿಮಾನ ಪ್ರಯಾಣದ ಟಿಕೆಟ್, ಪೆಟ್ರೋಲ್- ಡೀಸೆಲ್ ಖರೀದಿ, ಮನೆ ವಿದ್ಯುತ್ ಶುಲ್ಕ, ಮನೆ ಕೆಲಸದವರ ವೇತನ ಪಾವತಿಸಿದ್ದನ್ನು ಉಲ್ಲೇಖಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಆಗಿರುವುದು ಜಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.
ಬಳ್ಳಾರಿ ಲೋಕಸಭಾ ಚುನಾವಣೆಗೋಸ್ಕರ 3 ಶಾಸಕರ ಮೂಲಕ 14.80 ಕೋಟಿ ರೂ. ಹಣ ಬಳಕೆಯಾದುದು ಗೊತ್ತಾಗಿದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಣೇಶ್, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಅವರ ಮೂಲಕ ಸುಮಾರು 15 ಕೋಟಿ ವಿತರಣೆ ಮಾಡಿದ್ದಾರೆ ಎಂದು ವಿವರಿಸಿದರು.
ಈಗಿನ ಸಂಸದ ತುಕಾರಾಂರನ್ನು ಗೆಲ್ಲಿಸಲು ಒಂದೊಂದು ಮತಕ್ಕೆ 200 ರೂ. ಕೊಟ್ಟ ಆರೋಪವಿದೆ. ತುಕಾರಾಂ ಅವರ ಸ್ಥಾನಕ್ಕೆ ಉಪ ಚುನಾವಣೆ ಬರುತ್ತಿದ್ದು, 200 ರೂ. ಕೊಟ್ಟದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಇಡೀ ಸಮಾಜದ ದುಡ್ಡನ್ನು ನಮಗೆ ಹಂಚಿದ ಕಾರಣ ಅವರಿಗೆ ಬುದ್ಧಿ ಕಲಿಸಬೇಕೆಂದು ಜನ ಕಾಯುತ್ತಿದ್ದಾರೆ ಎಂದು ಭಾವಿಸುವುದಾಗಿ ಹೇಳಿದರು.
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ಲೋಕಸಭಾ ಚುನಾವಣೆಯಲ್ಲಿ ಕೆಲಸ ನಿರ್ವಹಿಸಲು ಕಾರ್ಯಕರ್ತನಿಗೆ 10 ಸಾವಿರ ರೂಪಾಯಿ ವೆಚ್ಚವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.