ದೆಹಲಿ, ಅ.19(DaijiworldNews/AA): ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಸ್ತಾರ ಯುಕೆ17 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಇದಾದ ಬಳಿಕ ತಪಾಸಣೆ ನಡೆಸಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರದ ಹಿನ್ನೆಲೆಯಲ್ಲಿ ಎರಡು ಗಂಟೆಗಳ ಬಳಿಕ ಮತ್ತೆ ಲಂಡನ್ ಗೆ ತೆರಳಿತು ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ಇಂದು ಮುಂಜಾನೆ ತಿಳಿಸಿದ್ದಾರೆ.
'ಅಕ್ಟೋಬರ್ 18 ರಂದು ದೆಹಲಿಯಿಂದ ಲಂಡನ್ಗೆ ತೆರಳುತ್ತಿದ್ದ ವಿಸ್ತಾರ ವಿಮಾನ ಯುಕೆ17ಗೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಲಾಗಿದೆ. ಶಿಷ್ಠಾಚಾರದ ಪ್ರಕಾರ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್ಗಳು ವಿಮಾನವನ್ನು ಫ್ರಾಂಕ್ಫರ್ಟ್ಗೆ ಮಾರ್ಗ ಬದಲಿಸಿದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.