ವಿಜಯಪುರ, ಅ.19(DaijiworldNews/AA): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಾಚ್ಯ ಪದಬಳಸಿ ಭಾಷಣ ಮಾಡಿದ್ದ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ದಾಖಲಾಗಿದೆ.
ಅಕ್ಟೋಬರ್ ೧೫ರಂದು ನಡೆದ 'ವಕ್ಫ್ ಹಠಾವೋ ದೇಶ ಬಚಾವೋ' ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಭರದಲ್ಲಿ ಯತ್ನಾಳ್ ಅವರು ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗೂ ಮುಸ್ಲಿಂ ಧರ್ಮಕ್ಕೆ ನಿಂದನೆ ಮಾಡಿದ್ದಾರೆ ಎಂದು ಪಾಲಿಕೆ ನಾಮನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಎಂಬುವರು ವಿಜಯಪುರದ ಗಾಂಧಿ ಚೌಕ್ ಠಾಣೆಯಲ್ಲಿ ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ.
ಜೊತೆಗೆ ನಗರದ ಶಾಂತಿ ನಗರದ ಶಾಂತಿ ಸೌಹಾರ್ಧವನ್ನು ಕೆಡಿಸುವ ದುರುದ್ದೇಶದಿಂದ ಸಾರ್ವಜನಿಕವಾಗಿ ಇತರೆ ಧರ್ಮದವರನ್ನು ಹಿಯ್ಯಾಳಿಸಿ ಮಾತನಾಡಿ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಎಲ್ಲರಿಗೂ ಮಾನಸಿಕ ನೋವನ್ನುಂಟು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ (U/s-352,353(2)) ಕಲಂ ಅಡಿ ದೂರು ದಾಖಲು ಮಾಡಿದ್ದಾರೆ.