ಬೆಂಗಳೂರು, ಅ.19(DaijiworldNews/AA): ಸಿದ್ದರಾಮಯ್ಯ ಈಗಲಾದರೂ ಭಂಡತನ ಬಿಟ್ಟು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಮುಡಾ ಕಚೇರಿ ಮೇಲೆ ಇ.ಡಿ ದಾಳಿ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 3-4 ತಿಂಗಳಿಂದ ಮುಡಾ ಹಗರಣ ಚರ್ಚೆ ಆಗಿತ್ತು. ಬಿಜೆಪಿ-ಜೆಡಿಎಸ್ ಹೋರಾಟ ಮಾಡಿ ಪಾದಯಾತ್ರೆ ಮಾಡಿತ್ತು. ಪ್ರಾಮಾಣಿಕವಾಗಿ ಆಡಳಿತ ಮಾಡುತ್ತೇವೆ, ಯಾವುದೇ ಕಳಂಕ ಇಲ್ಲ ಎಂದು ಸಿಎಂ ಹೇಳಿದ್ದರು. ಆದರೆ ಮುಡಾ ಕೇಸ್ ಅಕ್ರಮ ಆಗಿ ಎಷ್ಟು ಭಂಡತನ ಮಾಡಿದ್ದಾರೆ. ಮೊದಲು ಹಗರಣ ನಡೆದಿಲ್ಲ ಎಂದರು. ಬಿಜೆಪಿ ಅವರಿಗೆ ತಲೆ ಕೆಟ್ಡಿದೆ ಅಂದಿದ್ದರು. ಬಳಿಕ ಒಪ್ಪಿಕೊಂಡು ಮುಡಾ ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹೈಕೋರ್ಟ್, ಸೆಷನ್ಸ್ ಕೋರ್ಟ್ ತೀರ್ಪು ನಂತರ ಸಿಎಂ ಭಂಡತನ ಬಿಡಬೇಕಿತ್ತು. ಈಗ ಇ.ಡಿ ಅಖಾಡಕ್ಕೆ ಇಳಿದಿದೆ. ದಾಳಿ ಆಗಿದೆ. ಸಿಎಂ ತಾನು ನಿರಪರಾಧಿ ಅಂತ ಬಿಂಬಿಸುವ ಕೆಲಸ ಮಾಡಿದ್ರು. ಈಗ ರಾಜಕೀಯ ದಾಳಿ ಅಂತ ಇ.ಡಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣು ಆಗಿಲ್ಲ ಅನ್ನೋ ರೀತಿ ಇದ್ದಾರೆ. ಸಿಎಂಗೆ ಕಿಂಚಿತ್ತು ಕಾನೂನು ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಸೈಟ್ ವಾಪಸ್ ಕೊಟ್ಟರೂ ಕಾಲ ಮುಗಿದಿದೆ. ಸಿದ್ದರಾಮಯ್ಯ ಅವರು ಗೌರವಯುತ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಮುಡಾ ಕೇಸ್ನಲ್ಲಿ ಅಂದಿನ ಅಧಿಕಾರಿ ಕುಮಾರ್ ನಾಯಕ್ ಸಿದ್ದರಾಮಯ್ಯ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರ್ ನಾಯಕ್ಗೆ ಎಂಪಿ ಟಿಕೆಟ್ ಕೊಟ್ಟಾಗಲೇ ಅನುಮಾನ ಇತ್ತು. ಸಿಎಂ ಅವರ ಕುಟುಂಬಕ್ಕೆ ಲಾಭ ಪಡೆದಿದ್ದಾರೆ. ಅದಕ್ಕೆ ಬೆಂಬಲವಾಗಿ ನಿಂತಿದ್ದು ಕುಮಾರ್ ನಾಯಕ್ ಅವರು. ಹೀಗಾಗಿ ಸಿದ್ದರಾಮಯ್ಯ ಅವರು ಟಿಕೆಟ್ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡಾ ಅವರ ಪಾತ್ರ ಪರಿಗಣಿಸಿದೆ. ಮುಂದೆ ರಾಯಚೂರು ಸಂಸದ ಕುಮಾರ್ ನಾಯಕ್ ಅವರು ಕೂಡ ರಾಜೀನಾಮೆ ಕೊಡೋ ಸಮಯ ಬರಬಹುದು ಎಂದರು.