ಹುಬ್ಬಳ್ಳಿ, ಅ.19(DaijiworldNews/AA): ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 2 ಕೋಟಿ ರೂ. ಪಡೆದುಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಅವರನ್ನು ಬಂಧಿಸಲಾಗಿದೆ.
ಗೋಪಾಲ ಜೋಶಿ ಅವರನ್ನು ಎಸಿಪಿ ಚಂದನ್ ನೇತೃತ್ವದ ಬೆಂಗಳೂರು ಬಸವೇಶ್ವರ ನಗರ ಠಾಣೆ ಪೊಲೀಸರ ತಂಡ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದೆ. ಬಳಿಕ ಹುಬ್ಬಳ್ಳಿಯ ಇಂದಿರಾ ಕಾಲೋನಿಯ ಮನೆಯಲ್ಲಿ ತಪಾಸಣೆ ನಡೆಸಿ ಪಂಚನಾಮೆ ನಡೆಸಿದ ನಂತರ ಹೆಚ್ಚಿನ ಪ್ರಕ್ರಿಯೆ ನಡೆಸಲು ಕೇಶ್ವಾಪುರ ಠಾಣೆಗೆ ಕರೆದೊಯ್ದಿದ್ದಾರೆ.
ಆದರೆ ಮನೆಯಲ್ಲಿ ಯಾವುದೇ ತಪಾಸಣೆ ಮಾಡಿಲ್ಲ. ಹಣ ಸೇರಿ ಏನನ್ನೂ ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಪ್ರಕರಣದ ದೂರದಾರರಾದ ಸುನಿತಾ ಚವ್ಹಾಣ ಸಹ ಠಾಣೆಗೆ ಆಗಮಿಸಿ, ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.