ಹಾವೇರಿ, ಅ.20(DaijiworldNews/AA): ಉಪ ಚುನಾವಣೆಗೆ ಶೀಘ್ರದಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗುತ್ತದೆ. ಶಿಗ್ಗಾವಿಯಲ್ಲಿ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಸೋಮವಾರ ಸಂಜೆಯೊಳಗೆ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಸಚಿವ ಹೆಚ್. ಕೆ.ಪಾಟೀಲ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ತತ್ವ ಸಿದ್ಧಾಂತಗಳನ್ನ ಬಿಡುವುದಿಲ್ಲ. ಮುಸ್ಲಿಂ ಸಮುದಾಯದ ಇಬ್ಬರು ಆಕಾಂಕ್ಷಿಗಳ ಬಳಿ ಮಾತಾಡಿ ಅಂತಿಮ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ, ನಾಯಕರ ಶಿಫಾರಸು, ಶಾಸಕರ ಅಭಿಪ್ರಾಯ ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಶಿಗ್ಗಾವಿಯಲ್ಲಿ ಟಿಕೆಟ್ ಬದಲಾವಣೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕಾಂಗ್ರೆಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವುದಿಲ್ಲ. ರಾಜಕಾರಣದಲ್ಲಿ ಸಾಪ್ಟ್, ಹಾರ್ಡ್ ರಾಜಕಾರಣ ಕಾಂಗ್ರೆಸ್ ನಲ್ಲಿಲ್ಲ. ಉಪಚುನಾವಣೆ ಡಿಕೆಶಿ, ಸಿದ್ದರಾಮಯ್ಯನವರ ನಾಯಕತ್ವ ಕ್ರಿಯಾಶೀಲವಾಗಿದೆ ಎಂದು ತೋರಿಸುತ್ತದೆ. ಮೂಡಾ ಪ್ರಕರಣದಲ್ಲಾದ ರಾಜಕಾರಣ ಬಗ್ಗೆ ಜನರು ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದರು.
ಚುನಾವಣೆ ಘೋಷಣೆಗೂ ಇಡಿ ಅಧಿಕಾರಿಗಳು ದಾಳಿ ಮಾಡಿರುವುದಕ್ಕೂ ಏನು ಸಂಬಂಧ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಇಡಿ ಕ್ರಿಯಾಶೀಲವಾಯ್ತಾ? ಮುಡಾ ಪ್ರಕರಣದಲ್ಲಿ ಯಾವುದಾದರೂ ಹಣಕಾಸು ಬದಲಾವಣೆ ಆಗಿದೆಯಾ? ಯಾರಾದರೂ ಆಸ್ತಿ ತಗೊಂಡು ಓಡಿ ಹೋಗಿದ್ದಾರಾ? ರಾಜಕೀಯ ದುರುದ್ದೇಶ, ಕುತುಂತ್ರ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ. ಇಡಿಯನ್ನು ರಾಜಕೀಯ ದುರದ್ದೇಶಕ್ಕೆ ಕೇಂದ್ರ ಬಳಸಿಕೊಳ್ಳುತ್ತಿದೆ. ಇಡಿ ಇಟ್ಟಿರುವ ಈ ಹೆಜ್ಜೆ ಆ ಸಂಸ್ಥೆಯ ಘನತೆ ಕಡಿಮೆ ಮಾಡುತ್ತದೆ. ಲೋಕಾಯುಕ್ತ ತನಿಖೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ಇಡಿ ದಾಳಿ ಮಾಡಿದ್ದು ಯಾಕೆ? ಇಡಿ ದುರ್ಬಳಕೆ ಮಾಡಲಾಗಿದೆ ಎಂದು ಕಿಡಿಕಾರಿದರು.