ಹುಬ್ಬಳ್ಳಿ, ಅ.20(DaijiworldNews/AA): ಚುನಾವಣೆ ಸ್ಪರ್ಧೆ ಮುಖ್ಯವಲ್ಲ. ಗೆಲುವು ಮುಖ್ಯ. ಸಿ.ಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ ಎಂದು ಸಿಪಿವೈ ಪರ ವಿಧಾನಸಭಾ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಬ್ಯಾಟಿಂಗ್ ಮಾಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಗೆ ಗೆಲುವಿನ ವಾತಾವರಣವಿದೆ ಅವರೇ ಎನ್ಡಿಎ ಅಭ್ಯರ್ಥಿಯಾಗಬೇಕು. ಯೋಗೇಶ್ವರ್ ಮೇಲೆ ಜನರ ಪ್ರೀತಿ, ಅನುಕಂಪವಿದೆ. ಕುಮಾರಸ್ವಾಮಿ ಅವರು ಅತ್ಯಂತ ಪ್ರಬುದ್ಧ ರಾಜಕಾರಣಿ. ಅವರು ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ನಂತರ ಚನ್ನಪಟ್ಟಣದಲ್ಲಿ ಎನ್ಡಿಎಯಿಂದ ಹೊಸ ಅಭ್ಯರ್ಥಿ ಆಗಬೇಕು. ಈ ಹಿಂದೆ ಕುಮಾರಸ್ವಾಮಿ ಮತ್ತು ಡಾ. ಮಂಜುನಾಥ್ ಚುನಾವಣೆಯಲ್ಲಿ ಯೋಗೇಶ್ವರ್ ಒಳ್ಳೆಯ ಕಾರ್ಯ ಮಾಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಪಿವೈಗೆ ಟಿಕೇಟ್ ನೀಡುವ ಭರವಸೆ ಇದೆ ಎಂದು ಹೇಳಿದರು.
ಮುಡಾ ವಿಚಾರವಾಗಿ ಸಿಎಂ ಕುಣಿಕೆ ಗಟ್ಟಿಯಾಗುತ್ತಿದೆ ಇನ್ನೂ ಕೆಲವೇ ದಿನದಲ್ಲಿ ಸಿಎಂ ರಾಜಿನಾಮೆ ನೀಡುತ್ತಾರೆ. ಜಿ ಪರಮೇಶ್ವರ್ ಅವರು ಸಿಎಂ ಅವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪರವಾಗಿ ಮಾತನಾಡಿ ಅವರ ಅನುಗ್ರಹದಿಂದ ಸಿಎಂ ಆಗುವ ಆಸೆಯಲ್ಲಿದ್ದಾರೆ. ಈಗಾಗಲೇ ಪರಮೇಶ್ವರ್ ಸಿಎಂ ಸೀಟ್ಗೆ ಟೆವಲ್ ಹಾಕಿದ್ದಾರೆ. ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂಬಿ ಪಾಟೀಲ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ರೇಸ್ನಲ್ಲಿದ್ದಾರೆ ಎಂದರು.