ಬೆಂಗಳೂರು, ಅ.20(DaijiworldNews/AA): ಸ್ಯಾಂಡಲ್ ವುಡ್ ನ ಖ್ಯಾತ ನಟ ಸುದೀಪ್ ಅವರ ತಾಯಿ ಸರೋಜಾ ಅವರ ನಿಧನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್, ನಟ ರಾಘವೇಂದ್ರ ರಾಜ್ಕುಮಾರ್, ಹಿರಿಯ ನಟಿ ಜಯಮಾಲ ಸೇರಿ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಟ ಸುದೀಪ್ ಅವರ ತಾಯಿ, ಹಾಗೂ ನನ್ನ ಆತ್ಮೀಯ ಸ್ನೇಹಿತ ಸಂಜೀವ್ ಸರೋವರ ಅವರ ಪತ್ನಿ ಸರೋಜಕ್ಕ ನಿಧನ ಹೊಂದಿರುವುದು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಅತ್ಯಂತ ದುಃಖ ತಂದಿದೆ. ಸರೋಜ ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ನೋವು ತಂದಿದೆ. ಸುದೀಪ್ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
ಸುದೀಪ್ ತಾಯಿಯ ನಿಧನಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಪವನ್ ಕಲ್ಯಾಣ್ ಅವರು ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ. ಖ್ಯಾತ ನಟ ಕಿಚ್ಚ ಸುದೀಪ್ ತಾಯಿ ಸರೋಜ ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಸರೋಜ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಹಾಗೂ ಪ್ರೋತ್ಸಾಹವಿದೆ ಎಂದು ಸುದೀಪ್ ಹೇಳಿದ್ದರು. ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಬೇಕು. ಸುದೀಪ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರು, ಸರೋಜಾ ಹಾಗೂ ಪಾರ್ವತಮ್ಮನವರ ಗೆಳೆಯರಗಿದ್ದರು. ಜೊತೆಗೆ ಸುದೀಪ್ ಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ.