ಬೆಂಗಳೂರು,ಜೂ03(Daijiworld News/AZM): ಕರ್ನಾಟಕದಲ್ಲೂ ಹಿಂದಿ ಭಾಷೆ ಹೇರಿಕೆ ಕುರಿತು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ತಾವು ಈ ಕರಡು ನೀತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸುವುದಾಗಿ ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳಂತೂ ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸುತ್ತಿವೆ. ಕರ್ನಾಟಕದಲ್ಲಿರುವ ಹಿಂದಿ ಭಾಷಿಗರು ಕನ್ನಡ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ ಎನ್ನುವಾಗ ಕನ್ನಡಿಗರು ಹಿಂದಿಯನ್ನು ಯಾಕೆ ಕಲಿಯಬೇಕು ಎಂದು ಅನೇಕ ಟ್ವೀಟಿಗರು ಪ್ರಶ್ನೆ ಮಾಡಿದ್ದಾರೆ. #StopHindiImposition ಹ್ಯಾಷ್ಟ್ಯಾಗ್ ಇದೀಗ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.
ಹಿಂದಿ ಹೇರಿಕೆಗೆ ಕನ್ನಡಪರ ಸಂಘಟನೆಗಳು ಕೂಡಾ ವಿರೋಧ ವ್ಯಕ್ತಪಡಿಸಿವೆ. ಕೇಂದ್ರದ ಶಿಕ್ಷಣ ಕರಡು ನೀತಿ 2019ರ ವಿರುದ್ಧ ಕನ್ನಡ ಪರ ಸಂಘಟನೆಗಳು ಧ್ವನಿ ಎತ್ತಿವೆ. ಪ್ರತಿಭಟನೆಯನ್ನೂ ಕೂಡ ನಡೆಸುತ್ತಿವೆ. ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ ಹೊರತುಪಡಿಸಿ ಅದರ ಜೊತೆಗೆ ಶಾಲೆಗಳಲ್ಲಿ ಹಿಂದಿಯನ್ನೂ ಕಲಿಯಬೇಕು ಎಂಬ ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಇಡೀ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕನ್ನಡ ಗ್ರಾಹಕರ ಕೂಟದ ಸದಸ್ಯ ಗಣೇಶ್ ಚೇತನ್ ಹೇಳಿದ್ದಾರೆ.