ವಿಜಯಪುರ,ಜೂ 03 (Daijiworld News/MSP): ಜೆಡಿಎಸ್ನ ಮಾಜಿ ಜಿಲ್ಲಾಧ್ಯಕ್ಷೆ, ವಿಜಯಪುರದ ಹಾಲಿ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಅವರನ್ನು ಹತ್ಯೆಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತೌಫಿಕ್ ಶೇಕ್ ಅಲಿಯಾಸ್ ಪೈಲ್ವಾನ್ ಎಂದು ಗುರುತಿಸಲಾಗಿದೆ. ಆರೋಪಿ ತೌಫಿಕ್ ಸೊಲ್ಲಾಪುರದ ಎಂಐಎಂ ಮುಖಂಡನಾಗಿದ್ದಾನೆ. ಈತನ ವಿರುದ್ಧ ರೇಷ್ಮಾ ಪಡೇಕನೂರ ಅವರ ಗಂಡ ಖಾಜಾ ಬಂದೇ ನವಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಆರೋಪಿಯ ವಿರುದ್ಧ ಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆರೋಪಿಯನ್ನು ಧೂಳಖೇಡ ಗ್ರಾಮದ ಸಮೀಪ ಪೊಲೀಸರು ಬಂಧಿಸಿದ್ದಾರೆ. ಬಸವನಬಾಗೇವಾಡಿ ಸಿಪಿಐ ಮಹದೇವ ಶಿರಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕಾಂಗ್ರೆಸ್ ಮುಖಂಡರಾಗಿದ್ದ ರೇಷ್ಮಾ ಅವರನ್ನು ಮೇ 17 ರಂದು ಹತ್ಯೆ ಮಾಡಲಾಗಿತ್ತು. ಅವರ ಮೃತದೇಹ ವಿಜಯಪುರ ಜಿಲ್ಲೆಯ ಕೊಲ್ಹಾರ ಸನಿಹದ ಕೃಷ್ಣಾ ನದಿಯ ಸೇತುವೆ ಕೆಳಭಾಗದಲ್ಲಿ ಪತ್ತೆಯಾಗಿತ್ತು.
ಈ ಹಿಂದೆ ರೇಷ್ಮಾ ಜೆಡಿಎಸ್ ಜಿಲ್ಲಾಧ್ಯಕ್ಷೆ ಆಗಿದ್ದರು. ಅವರು 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಜಯಪುರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.