ಅಹಮದಾಬಾದ್, ಜೂ 03 (Daijiworld News/MSP): ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರಿಗೆ ಹಾಗೂ ಆಕೆಯ ಪತಿಗೆ ಬಿಜೆಪಿ ಶಾಸಕ ಕಾಲಿಂದ ಒದೆಯುತ್ತಿರುವ ಆಘಾತಕಾರಿ ವಿಡೀಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೀಗ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಹಮದಾಬಾದ್ನ ನರೋಡದ ಎನ್ಸಿಪಿ ನಾಯಕಿ ನಿತು ತೇಜ್ವಾನಿ, ವಿಧಾನಸಭಾ ಕ್ಷೇತ್ರದ ಶಾಸಕ ಬಲರಾಮ್ ಥವಾನಿ ಬಳಿ ತಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿಂದೆ ಇದೆ ಶಾಸಕರಿಗೆ ದೂರು ಸಲ್ಲಿಸಲು ಬಂದಿದ್ದರು. ಈ ವೇಳೆ ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡುವ ಬದಲು ಆಕೆಗೆ ಶಾಸಕರು ಮನ ಬಂದಂತೆ ಕಾಲಿನಿಂದ ಒದ್ದು ಅಮಾನೀಯತೆಯಿಂದ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ನಿತು ತೇಜ್ವಾನಿ ಮತ್ತು ಶಾಸಕರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಸಮಸ್ಯೆ ಪರಿಹಾರ ಒದಗಿಸದಿದ್ದರೆ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತುಕೊಳ್ಳುವುದಾಗಿ ನಿತು ತೇಜ್ವಾನಿ ಬೆದರಿಕೆ ಹಾಕಿದ್ದಳು. ಆಗ ಸಿಟ್ಟಿಗೆದ್ದ ಶಾಸಕರ ಬೆಂಬಲಿಗರು ಕಚೇರಿ ಹೊರಗೆ ಆಕೆಯನ್ನು ಥಳಿಸಿದ್ದಾರೆ. ನೆಲಕ್ಕೆ ಬಿದ್ದಿದ್ದ ಆಕೆಗೆ ಶಾಸಕ ಒದ್ದಿದ್ದಾನೆ ಎನ್ನಲಾಗುತ್ತಿದೆ.
ಈ ಬಗ್ಗೆ ನಿತು ತೇಜ್ವಾನಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು, " ಶಾಸಕರನ್ನು ಸ್ಥಳೀಯ ಸಮಸ್ಯೆಯ ವಿಚಾರದಲ್ಲಿ ಭೇಟಿ ಮಾಡಲು ಹೋಗಿದ್ದೆ. ಆದರೆ ನಮ್ಮ ಸಮಸ್ಯೆ ಕೇಳುವ ಮೊದಲೇ ನನಗೆ ಅವರು ಕಪಾಳ ಬಾರಿಸಿದರು. ನಾನು ಕೆಳಗೆ ಬಿದ್ದಾಗ ಅವರು ನನ್ನನ್ನು ಒದೆಯಲು ಪ್ರಾರಂಭಿಸಿದರು. ಮಾತ್ರವಲ್ಲದೆ ನನ್ನ ಪತಿಯ ಮೇಲೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.. ಬಿಜೆಪಿ ಆಳ್ವಿಕೆಯಡಿಯಲ್ಲಿ ಮಹಿಳೆಯರು ಹೇಗೆ ಸುರಕ್ಷಿತರಾಗಿದ್ದಾರೆ? ಎಂಬ ಬಗ್ಗೆ ಮೋದಿಯನ್ನು ಪ್ರಶ್ನಿಸುತ್ತೇನೆ ಎಂದಿದ್ದಾರೆ.
ಶಾಸಕರ ಹಲ್ಲೆಗೊಳಗಾದ ಎನ್ಸಿಪಿ ನಾಯಕಿ ನಿತು ತೇಜ್ವಾನಿ ಆಸ್ಪತೆಗೆ ದಾಖಲಾಗಿದ್ದಾರೆ. ಇನ್ನೊಂದೆಡೆ ಶಾಸಕರ ವಿಡೀಯೋ ವೈರಲ್ ಆಗಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಾಸಕ ತಾನು ಮಾಡಿದ್ದು ತಪ್ಪು ಎಂದು ಕ್ಷಮೆಯಾಚಿಸಿದ್ದಾರೆ.