ಎರ್ನಾಕುಲಂ,ಜೂ03(Daijiworld News/AZM):ಕೇರಳದಲ್ಲಿ ನಿಪಾಹ್ ವೈರಸ್ ಮತ್ತೇ ಕಂಡುಬಂದಿದ್ದು, ಓರ್ವ ಯುವಕನನ್ನು ಆಸ್ಪತ್ರೆಗೆ ದಾಖಲಿಸಗಿದೆ.
ಕೇರಳದ ಎರ್ನಾಕುಲಂ ನಲ್ಲಿ 23 ವರ್ಷದ ಯುವಕನಲ್ಲಿ ನಿಪಾಹ್ ವೈರಸ್ ಲಕ್ಷಣಗಳು ಕಂಡುಬಂದಿದ್ದು, ಆತನನ್ನು ಎರ್ನಾಕುಲಂ ನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವರ್ಷ ಈ ವೈರಸ್ ನಿಂದ ಕೇರಳದಲ್ಲಿ 17 ಮಂದಿ ಮೃತಪಟ್ಟಿದ್ದರು.
ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್ಸ್ಟಿಟ್ಯೂಟ್ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯೂ ಸಾಕಷ್ಟು ಮಂದಿ ಚಿಕಿತ್ಸೆಗೆಂದು ಬಂದಿದ್ದರು ಆದರೆ ವರದಿಯಲ್ಲಿ ನಿಪಾಹ್ ವೈರಸ್ ಇಲ್ಲ ಎಂದು ಬಂದಿತ್ತು. ಎರ್ನಾಕುಲಂ ವಿದ್ಯಾರ್ಥಿ ಇಡುಕಿಗೆ ತರಬೇತಿಗಾಗಿ ಬಂದಿದ್ದ, ಮನೆಗೆ ವಾಪಸಾದಾಗ ತೀವ್ರ ಜ್ವರ ಕಾಣಿಸಿಕೊಂಡಿತ್ತು ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ.
ನಿಪಾಹ್ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ.
ಯಾವುದೇ ರೀತಿಯ ಸೋಂಕುಗಳಾದರೂ ಅದರ ನಿರ್ಮೂಲನೆ ಅಥವಾ ನಿಯಂತ್ರಣ ಮನಷ್ಯನ ರೋಗ ನಿರೋಧಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥಗಳು, ಡಯಟ್ ಗಳನ್ನು ಪಾಲಿಸುವುದು ಉತ್ತಮ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹರ್ಬಲ್ ಟೀ ಅಥವಾ ವಿವಿಧ ಬಗೆಯ ಕಷಾಯಗಳನ್ನು ಆಗಾಗ ಸೇವಿಸುತ್ತಿರಬೇಕು.