ಕೊಪ್ಪಳ,ಅ.25(DaijiworldNews/TA):ಮರಕುಂಬಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡು ಅಪರಾಧಿಯೊಬ್ಬಸಾವಿಗೀಡಾಗಿರುವ ಘಟನೆ ನಡೆದಿದೆ.
ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ವಿಚಾರವಾಗಿ ಶಿಕ್ಷೆ ಪ್ರಕಟವಾಗಿತ್ತು. ರಾಮಣ್ಣ ಭೋವಿ (40) ಮೃತದುರ್ದೈವಿ ಎಂದು ತಿಳಿದುಬಂದಿದೆ. ರಾಮಣ್ಣ ಭೋವಿ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಗುರುವಾರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದಾಗಲೂ ರಾಮಣ್ಣ ಅಸ್ವಸ್ಥನಾಗಿದ್ದನು.
ವೈದ್ಯರು ನ್ಯಾಯಾಲಯದಲ್ಲೇ ರಾಮಣ್ಣಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ಬಳಿಕ ರಾಮಣ್ಣನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯಾಯಾಲಯ ರಾಮಣ್ಣ ಭೋವಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿತ್ತು. ಶಿಕ್ಷೆಯ ನಂತರ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.