ಬೆಂಗಳೂರು,ಅ.26(DaijiworldNews/AK): ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ವೇಳೆ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಸೇರಿದ್ದರು. ಎನ್ ಡಿಎ ಮೈತ್ರಿಕೂಟದ ನಾಯಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಇದು ಐತಿಹಾಸಿಕ ಸಭೆ ಆಗಿತ್ತು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆ ಎಂದು ಕಿಡಿಕಾರಿದರು.
ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಜನ ಕಾರ್ಯಕ್ರಮಕ್ಕೆ ಬರಬಾರದಾ? ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಒಂದು ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲಾ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ. ಶುಕ್ರವಾರ ನಮ್ಮ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆ ಇಲ್ಲ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ ಎಂದರು.