ಮಡಿಕೇರಿ, ಅ.26(DaijiworldNews/AK): ಮದುವೆಯಾಗಿ ಎರಡು ಮಕ್ಕಳಾದರೂ ಮತ್ತೆ ಓದಿ ಎಂಜಿನಿಯರ್ ಆದಳು. ಅಷ್ಟೇ ಅಲ್ಲ ಐಟಿ ಕಂಪೆನಿಯಲ್ಲಿ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಳು. ಆದರೆ ತಾನು ಸಂಪಾದನೆ ಹಣದಲ್ಲಿ ಸುಖ ಜೀವನ ನಡೆಸುವ ಬದಲು ಈಕೆ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಕೊನೆಗೆ ಕೊಡಗು ಪೊಲೀಸರ ಬಲೆ ಬಿದ್ದ ಕೊಲೆಗಾರ್ತಿ ಆಕೆಯ ಪ್ರಿಯಕರ ವೈದ್ಯ ಮತ್ತು ಸ್ನೇಹಿತ ಜೈಲುನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಅ. 8ರಂದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಪನ್ಯ ಎಸ್ಟೇಟ್ನಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗುತ್ತದೆ. ಸುಮಾರು ಮೂರರಿಂದ ನಾಲ್ಕು ದಿನಗಳ ಹಿಂದೆ ದೇಹ ಸುಟ್ಟಂತಿತ್ತು. ಆದರೆ ಮೃತದೇಹ ಯಾರದ್ದು ಎಂಬುದುಕ್ಕೆ ಯಾವುದೇ ಸುಳಿವು ಇರಲಿಲ್ಲ. ಬಹಳ ಕ್ಲಿಷ್ಟಕರವಾದ ಈ ಪ್ರಕರಣವನ್ನ ಬೇಧಿಸಲು ಸ್ವತಃ ಎಸ್ಪಿ ರಾಮಜರಾಜನ್ ಕಾರ್ಯಚರಣೆಗೆ ಮುಂದಾದರೂ. ಈ ಪ್ರಕರಣದ ತನಿಖೆಗಾಗಿ 16 ಪೊಲಿಸರ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ನಾಲ್ಕು ದಿನಗಳ ಹಿಂದೆ ಈ ಭಾಗದಲ್ಲಿ ಓಡಾಡಿದ್ದ ವಾಹನಗಳ ವಿವರವನ್ನು ಸಿಸಿಟಿವಿಗಳಲ್ಲಿ ಪೊಲಿಸರು ಪರಿಶೀಲಿಸಿದ್ದಾರೆ.
ಆರೋಪಿಗಳ ಜಾಡು ಹಿಡಿದ ಪೊಲೀಸರು:
ಮಡಿಕೇರಿಯಿಂದ ತುಮಕೂರು ವರೆಗೂ 500ಕ್ಕೂ ಅಧಿಕ ಸಿಸಿಟಿವಿ ದೃಶ್ಯವಾಳಿಗಳ ತನಿಖೆ ನಡೆಯುತ್ತದೆ. ಇಷ್ಟೆಲ್ಲ ತನಿಖೆಯ ಬಳಿಕ ಒಂದು ಕೆಂಪು ಬಣ್ಣದ ಬೆಂಜ್ ಕಾರಿನ ಮೇಲೆ ಇವರ ಅನುಮಾನ ಕೇಂದ್ರೀಕೃತವಾಗುತ್ತದೆ. ಈ ಕಾರು ಯಾರದ್ದು ಎಂದು ಪರಶೀಲನೆ ಮಾಡಿದಾಗ ಅದು ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ 54 ವರ್ಷದ ರಮೇಶ್ ಅವರದ್ದು ಎಂಬುದು ತಿಳಿಯುತ್ತದೆ. ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಸಾಗಿದಾಗ, ಅವರು ಒಂದು ವಾರದಿಂದ ಎಲ್ಲೂ ಕಾಣಸಿಗುತ್ತಿಲ್ಲ ಎಂಬ ಮಾಹಿತಿ ಬೆಳಕಿಗೆ ಬರುತ್ತದೆ.
ಕೊಡಗು ಪೊಲೀಸರು ರಮೇಶ್ನ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಮಾಡ್ತಾರೆ. ಈ ಸಂದರ್ಭ ರಮೇಶ್ನ ಎರಡನೇ ಹೆಂಡತಿ ನಿಹಾರಿಕಾಳ ಮೇಲೆ ಅನುಮಾನ ಮೂಡುತ್ತದೆ. ಹಾಗೆಯೆ ಅವಳ ಜೊತೆ ಅತಿ ಸಲುಗೆಯಿಂದ ಇದ್ದ ಬೆಂಗಳೂರಿನ ಪಶು ವೈದ್ಯ ಡಾ. ನಿಖಿಲ್ ಹಾಗೂ ಆಕೆಯ ಸ್ನೇಹಿತ ಅಂಕುರ್ ರಾಣಾನತ್ತಲೂ ತನಿಖೆಯ ಜಾಡು ಸಾಗುತ್ತದೆ. ಕೊನೆಗೆ ನಿಹಾರಿಕಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ವಿಷಯವನ್ನು ಬಾಯಿಬಿಡುತ್ತಾಳೆ.
29 ವರ್ಷದ ನಿಹಾರಿಕಾ ಮೂಲತಃ ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯ ಮೋಂಗೀರ್ ನಗರದ ನಿವಾಸಿ. 16 ವರ್ಷದವಳಾಗಿದ್ದಾಗ ಆಕೆಯ ಅಪ್ಪ ಸಾವನ್ನಪ್ಪಿದ್ದರು. ಹಾಗಾಗಿ ತಾಯಿ ಆಕೆಯನ್ನ 16 ವರ್ಷಕ್ಕೆ ವಿವಾಹ ಮಾಡಿಸಿದ್ದರು. ಆಕೆಗೆ ಎರಡೂ ಮಕ್ಕಳೂ ಜನಿಸಿವೆ. ಆದರೆ ಗಂಡನ ಜೊತೆ ವೈಮನಸ್ಯದಿಂದಾಗಿ ಡೈವೋರ್ಸ್ ಪಡೆಯುತ್ತಾಳೆ. ಶಾಲಾ ದಿನಗಳಲ್ಲಿ ಅತಿ ಬುದ್ಧಿವಂತೆಯಾಗಿದ್ದ ಆಕೆ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕೂ ಅಧಿಕ ಮಾರ್ಕ್ಸ್ ಪಡೆಯುತ್ತಿದ್ದಳು. ಹಾಗಾಗಿ ಡೈವೋರ್ಸ್ ಬಳಿಕ ಕಷ್ಟಪಟ್ಟು ಎಂಜಿನಿಯರಿಂಗ್ ಪಾಸ್ ಮಾಡಿ ಹಲವು ಬಗೆಯ ಕಂಪ್ಯೂಟರ್ ಕೋರ್ಸ್ಗಳನ್ನೂ ಮಾಡುತ್ತಾಳೆ. ಬಳಿಕ ಬೆಂಗಳೂರಿನ ಟಿಸಿಎಸ್ ಸೇರಿದಂತೆ ಹಲವೆಡೆ ಹಲವು ವರ್ಷಗಳ ಕಾಲ ಕೆಲಸ ಮಾಡುತ್ತಾಳೆ.
ಆಕೆಗೆ 1 ಲಕ್ಷದ 20 ಸಾವಿರ ರೂ ಸಂಬಳ ಇತ್ತು. ಇದರ ಮಧ್ಯೆ ಆಕೆಗೆ ಹರ್ಯಾಣ ಮೂಲದ ವ್ಯಕ್ತಿಯೊಬ್ಬನ ಜೊತೆ ಪ್ರೇಮಾಂಕುರವಾಗಿ ಅಲ್ಲಿಗೆ ಹೋಗಿ ಕೆಲ ಸಮಯ ನೆಲೆಸಿರುತ್ತಾಳೆ. ಆದರೆ ಅಲ್ಲಿ ಆತನಿಗೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಮಾಡಿ ಜೈಲು ಸೇರಿರುತ್ತಾಳೆ. ಅಲ್ಲಿ ಪರಿಚಯವಾಗುವ ಮಹಿಳೆಯ ಮಗನೇ ಅಂಕುರ್ ರಾಣಾ. ಆತನೂ ಅಪರಾಧಿ ಹಿನ್ನೆಲೆಯವನು. ಬಳಿಕ ಬೆಂಗಳೂರಿಗೆ ಬರುವ ಆಕೆಗೆ ರಮೇಶನ ಪರಿಚಯವಾಗಿ ವಿವಾಹವಾಗುತ್ತಾಳೆ.
ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್ಗೆ 2018ರಲ್ಲಿ ನಿಹಾರಿಕಾಳ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ರಿಜಿಸ್ಟರ್ ವಿವಾಹವಾಗಿರುತ್ತಾರೆ. ಆಕೆಯ ಐಷಾರಾಮಿ ಜೀವನಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ರಮೇಶನೇ ಪೂರೈಸುತ್ತಿದ್ದ. ನಿಹಾರಿಕಾಗೆ ಐಷಾರಾಮಿ ಬದುಕಿನ ಚಾಳಿ ಇತ್ತು. ಬೆಂಗಳೂರಿನ ರಾಮಮೂರ್ತಿ ನಗರದ ಪಶು ವೈದ್ಯ ಡಾ. ನಿಖಿಲ್ ಜೊತೆ ನಿಹಾರಿಕಾಗೆ ಅಕ್ರಮ ಸಂಬಂಧ ಇರುತ್ತದೆ. ನಿಹಾರಿಕಾ ತನ್ನ ನಾಯಿಗೆ ಚಿಕಿತ್ಸೆ ನೀಡಲೆಂದು ಪಶುವೈದ್ಯ ನಿಖಿಲ್ ಬಳಿ ತೆರಳಿದ್ದಾಗ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ಈ ಮಧ್ಯೆ ರಿಯಲ್ ಎಸ್ಟೇಟ್ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ನಿಹಾರಿಕಗೂ ರಮೇಶ್ಗೂ ತೀವ್ರ ಭಿನ್ನಾಭಿಪ್ರಾಯ ಮೂಡಿ, ರಮೇಶ್ ನಿಹಾರಿಕಾಗೆ ಹಣ ನೀಡುವುದನ್ನ ನಿಲ್ಲಿಸಿದ್ದ. ರಮೇಶ್ನಿಂದ ಈಕೆ 8 ಕೋಟಿ ರೂ ಹಣ ನಿರೀಕ್ಷೆ ಮಾಡಿದ್ದಳಂತೆ. ಆದರೆ ಬಿಡಿಗಾಸು ಗಿಟ್ಟುವುದಿಲ್ಲ ಎಂಬುದು ಗೊತ್ತಾದಾಗ ತನ್ನ ಸ್ನೇಹಿತ ಅಂಕುರ್ ರಾಣಾ ಜೊತೆಗೂ ರಮೇಶ್ ಅವನ್ನು ಕೊಲೆಗೆ ಸ್ಕೆಚ್ ಮಾಡುತ್ತಾಳೆ.
ಅಕ್ಟೋಬರ್ ಒಂದಕ್ಕೆ ಹೈದ್ರಾಬಾದ್ ಸಮೀಪದ ಉಪ್ಪಳ್ಗೆ ಬರುವಂತೆ ಪತಿ ರಮೇಶ್ಗೆ ಕರೆ ಮಾಡುತ್ತಾಳೆ. ಅದರಂತೆ ಅಲ್ಲಿಗೆ ಬಂದ ರಮೇಶ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡುತ್ತಾರೆ. ಬಳಿಕ ರಮೇಶ್ ಮನೆಗೆ ತೆರಳಿ ಅಲ್ಲಿಂದ ಆತನ ಬೆಂಜ್ ಕಾರು ಹಾಗೂ ಹಣ ತೆಗೆದುಕೊಂಡು ಡೆಡ್ ಬಾಡಿ ಜೊತೆಗೇ ಬೆಂಗಳೂರಿಗೆ ಬಂದು ಅಲ್ಲಿ ತನ್ನ ಸ್ನೇಹಿತ ಡಾ ನಿಖಿಲ್ನ ಜೊತೆಗೂಡಿ ಕೊಡಗಿಗೆ ಬರುತ್ತಾಳೆ. ಯಾರಿಗೂ ಶಂಕೆ ಬಾರದಂತೆ ಕಾಫಿ ತೋಟಕ್ಕೆ ತೆರಳಿ ಅಲ್ಲಿ ಹೆಣವನ್ನ ಬಿಸಾಕಿ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾರೆ. ಎಲ್ಲಿಯೂ ಸ್ವಲ್ಪವೂ ಶಂಕೆ ಬಾರದಂತೆ ಸಹಜವಾಗಿಯೇ ವರ್ತಿಸಿದ್ದರು.
ದೇಹ ಸುಟ್ಟ ಬಳಿಕ ಉಪ್ಪಳ್ಗೆ ತೆರಳಿ ಸ್ವಲ್ಪ ದಿನ ಬಿಟ್ಟು ರಮೇಶ್ ನಾಪತ್ತೆ ಅಂತ ದೂರು ನೀಡಲು ರೆಡಿಯಾಗಿದ್ದಾಗಲೇ ಕೊಡಗು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ನಿಹಾರಿಕಾ, ಅಂಕುರ್ ಮತ್ತು ಡಾ ನಿಖಿಲ್ನನ್ನು ಕೊಡಗು ಪೊಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.. ಅಂಕುರ್ ಪತ್ನಿ ಇತ್ತೀಚೆಗೆ ನಾಪತ್ತೆಯಾಗಿದ್ದು, ಅಂಕುರನೇ ಆಕೆಯನ್ನ ಕೊಲೆ ಮಾಡಿರುವ ಸಾಧ್ಯತೆ ಕುರಿತು ಕೂಡ ತನಿಖೆ ನಡೆಯುತ್ತಿದೆ.