ಬೆಂಗಳೂರು, ಅ.27(DaijiworldNews/AA): ವಕ್ಫ್ ಹೆಸರಲ್ಲಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.
ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ನಿಂದ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಬೋರ್ಡ್ ಜೊತೆ ಸೇರಿಕೊಂಡು ರೈತರ 15 ಸಾವಿರ ಎಕ್ರೆ ಭೂಮಿಯನ್ನು ಕಬಳಿಸಲು ಸರ್ಕಾರ ಹುನ್ನಾರ ನಡೆಸಿದೆ. ಹರಿಜನರಿಗೆ ನೋಟಿಸ್ ಕೊಟ್ಟು ಅವರ ಭೂಮಿ ಕಿತ್ತುಕೊಳ್ಳುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಜಂಟಿ ಸದನ ಸಮಿತಿ ವಕ್ಫ್ ತಿದ್ದುಪಡಿ ಸಂಬಂಧ ಚರ್ಚೆ ನಡೆಸುತ್ತಿದೆ. ಅಷ್ಟರಲ್ಲಿ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೋಟಿಸ್ ಕೊಡುವ ಅಗತ್ಯ ಇರಲಿಲ್ಲ. ಬಿಜೆಪಿಯಿಂದ ಸರ್ಕಾರಕ್ಕೆ, ವಕ್ಫ್ ಬೋರ್ಡ್ ಗೆ 15 ದಿನಗಳ ಗಡುವು ನೀಡುತ್ತಿದ್ದೇವೆ ಎಂದು ತಿಳಿಸಿದರು.
15 ದಿನಗಳಲ್ಲಿ ಪಹಣಿ ತಿದ್ದುಪಡಿಯಾಗಿ ಭೂಮಿ ರೈತರ ಹೆಸರಿಗೆ ಸೇರಬೇಕು. ಇಲ್ಲದಿದ್ದರೆ ರೈತರನ್ನು ಸಂಘಟಿಸಿ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.