ನವದೆಹಲಿ, ಜೂ03(Daijiworld News/SS): ಸರ್ಕಾರದ ನಿರ್ಧಾರಕ್ಕೆ ಹಿಂದಿಯೇತರ ರಾಜ್ಯಗಳಿಂದ ಬೃಹತ್ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರವು ಶೈಕ್ಷಣಿಕ ಪಠ್ಯದಲ್ಲಿ ಮೂರು ಭಾಷೆಗಳ ಕಲಿಕೆ ಕಡ್ಡಾಯ ಎಂಬ ಷರತ್ತನ್ನು ಹಿಂಪಡೆದಿದೆ.
ಹಿಂದಿ ಭಾಷೆ ಕಡ್ಡಾಯ ಕಲಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಾಗಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುಪ್ರತಿನಲ್ಲಿ ಪ್ರಸ್ತಾಪಿಸಿರುವ ಆಡ್-ಆನ್ ವೈಶಿಷ್ಟ್ಯದಲ್ಲಿನ ತ್ರಿಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಇದು "ಹಿಂದಿ ಹೇರಿಕೆ"ಗೆ ಕೇಂದ್ರದ ಕುತಂತ್ರ ಎಂದು ಅವುಗಳು ಆರೋಪಿಸಿದ್ದವು.
ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಅರ್ಥವೇನು..? ಕೇಂದ್ರ ಸರ್ಕಾರ ಹಿಂದಿ ಕಡ್ಡಾಯ ಆಗಿಸಲು ಬಯಸುತ್ತಿದೆ. ಹಿಂದಿ ಭಾಷೆ ಕಡ್ಡಾಯ ವಿಷಯವಾಗಿದ್ದರೆ ಇದು ಅವರ ಹಿಂದಿ ಹೇರಿಕೆಯ ಸಾಕ್ಷಿಯಾಗಲಿದೆ. ಹಿಂದಿ ಹೇರಿಕೆಯ ಮೂಲಕ ಬಿಜೆಪಿ ಸರ್ಕಾರದ ನೈಜ ಮುಖ ಹೊರಹೊಮ್ಮುತ್ತಿದೆ ಅವರು ಹೇಳಿದ್ದಾರೆ.
ಈ ನಡುವೆ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.