ಹಾಸನ, ಅ.27(DaijiworldNews/AA): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹವಾಮಾನ ವೈಪರಿತ್ಯ ಉಂಟಾಗಿ ಅತಿವೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ಪರಿಹಾರ ನೀಡುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ನೀಡುವ ಕೆಲಸವನ್ನು ಮಾಡಬೇಕಿದೆ ಎಂದು ಕೇಂದ್ರ ಸಚಿವ ಎಚ್ .ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಹಾಸನಾಂಬ ದೇವಿಯ ದರ್ಶನದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಈ ಭಾರಿ ಸುಮಾರು 80,000 ಎಕ್ಟರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಯಾಗಿವೆ. ಕೂಡಲೇ ರಾಜ್ಯ ಸರ್ಕಾರ ಪ್ರತಿ ಹಳ್ಳಿ ಹಳ್ಳಿಗಳ ಅತಿವೃಷ್ಟಿ ಹಾನಿಯ ಬಗ್ಗೆ ಮಾಹಿತಿ ಪಡೆದು ರೈತರಿಗೆ ನೆರವಾಗಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸ ಕೈಗಾರಿಕೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸಿದ್ದು ಹಾಸನ ಜಿಲ್ಲೆಗೂ ಕೈಗಾರಿಕೆ ತರುವ ನಿಟ್ಟಿನಲ್ಲಿ ಉದ್ಯಮಿಗಳ ಜೊತೆ ಚರ್ಚೆ ಮಾಡಲಾಗಿದೆ. ಈಗಾಗಲೇ ಮೂಲೆಗುಂಪಾಗಿರುವ ಕೈಗಾರಿಕೆಗಳಿಗೆ ಮರು ಜೀವ ತುಂಬುವ ನಿಟ್ಟಿನಲ್ಲಿ ದೇಶದ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇದರಿಂದ ಅನೇಕ ಯುವಕರಿಗೆ ಉದ್ಯೋಗ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.