ಲಕ್ನೋ,ಅ.27(DaijiworldNews/TA): ಇಲ್ಲಿನ 10 ಹೋಟೆಲ್ಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು 45 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಮ್ಯಾರಿಯಟ್, ಫಾರ್ಚೂನ್ ಪಾರ್ಕ್ ಬಿಬಿಡಿ, ಸರಕಾ ಹೋಟೆಲ್, ದಿ ಪಿಕ್ಯಾಡಿಲಿ, ಕಂಫರ್ಟ್ ಹೋಟೆಲ್ ವಿಸ್ಟಾ, ಕ್ಲರ್ಕ್ ಅವಧ್, ದಯಾಳ್ ಗೇಟ್ವೇ, ಹೋಟೆಲ್ ಸಿಲ್ವೆಟ್ ಸೇರಿದಂತೆ ಇನ್ನಿತರ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂಬುವುದಾಗಿ ಮೂಲಗಳು ತಿಳಿಸಿದೆ.
ಭಾನುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಜೊತೆಗೆ ನೆಲಮಹಡಿಯಲ್ಲಿರುವ ಕಪ್ಪು ಚೀಲವೊಂದರಲ್ಲಿ ಸ್ಫೋಟಕ ವಸ್ತುಗಳಿವೆ. ಒಂದು ವೇಳೆ ನೀವು ಹಣ ಕೊಡದೇ ಇದ್ದರೆ ನಿಮ್ಮ ಹೋಟೆಲ್ ಸ್ಫೋಟಗೊಳ್ಳುತ್ತದೆ ಎಂಬುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹಣ ಬೇಕು ಇಲ್ಲವಾದರೆ ನಾನು ಸ್ಫೋಟಕಗಳನ್ನು ಸ್ಫೋಟಿಸುತ್ತೇನೆ. ರಕ್ತಪಾತವಾಗುತ್ತದೆ. ನೀವು ಏನೇ ಪ್ರಯತ್ನ ಮಾಡಿದರೂ ಅದು ವ್ಯರ್ಥವಾಗುತ್ತದೆ.
ಇತ್ತೀಚಿಗೆ ತಿರುಪತಿಯ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ದೇಶ-ವಿದೇಶದ ವಿಮಾನಗಳಿಗೆ ಕೂಡ ಬಾಂಬ್ ಬೆದರಿಕೆ ಬಂದಿದ್ದವು. ಈ ಸಂಬಂಧ ತನಿಖೆ ನಡೆಯುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬುವುದಾಗಿ ತಿಳಿಸಿದೆ.