ರಾಮನಗರ, ಅ.28(DaijiworldNews/AA): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಅವರ ಹೇಳಿಕೆಗೆ ಜೆಡಿಎಸ್ ನಾಯಕರು ಗರಂ ಆಗಿದ್ದು, ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಗೆ ಭಾನುವಾರ ಕೋಡಂಬಹಳ್ಳಿಯಲ್ಲಿ ಪ್ರಚಾರ ನಡೆಸಿದ್ದ ಡಿಕೆ ಸುರೇಶ್ ಅವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಯೇ ಜೆಡಿಎಸ್ಗೆ ಹೊಸ ಅಸ್ತ್ರವಾಗಿದೆ. 'ನಾಳೆ ಆಂಬ್ಯುಲೆನ್ಸ್ ತೆಗೆದುಕೊಂಡು ಬಂದು ಪ್ರಚಾರ ಮಾಡುತ್ತಾರೆ. ಪ್ರಚಾರಕ್ಕೆ ಬರಲಿ, ಅವರ ಆರೋಗ್ಯವೂ ಚೆನ್ನಾಗಿರಲಿ' ಎಂದು ಡಿಕೆಸು ಹೇಳಿದ್ದರು.
ಚನ್ನಪಟ್ಟಣ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಇಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಮತ್ತೊಂದೆಡೆ, 26 ಹಳ್ಳಿಗಳ ಗ್ರಾಮಸ್ಥರ ಜೊತೆ ನಿಖಿಲ್ ಪ್ರಚಾರ ಮಾಡಲಿದ್ದಾರೆ. ಸಂಸದ ಯದುವೀರ್ ಒಡೆಯರ್ ಜೊತೆ ಪ್ರತ್ಯೇಕವಾಗಿ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಒಂದೇ ದಿನದಲ್ಲಿ 25 ಸಾವಿರಕ್ಕೂ ಅಧಿಕ ಮತದಾರರ ಸಂಪರ್ಕ ಮಾಡಲು ಜೆಡಿಎಸ್ ತಯಾರಿ ನಡೆಸಿದೆ.