ನವದೆಹಲಿ, ಅ.28(DaijiworldNews/AA): ದೆಹಲಿ ಸರ್ಕಾರದ ಅನುಮತಿ ಪಡೆಯದೇ ವರದಿ ಸಲ್ಲಿಸಿರುವ ಹಿನ್ನೆಲೆ ದೆಹಲಿ ವಕ್ಫ್ ಬೋರ್ಡ್ ಸಲ್ಲಿಸಿದ ವರದಿಯನ್ನು 'ಶೂನ್ಯ ಮತ್ತು ಅನೂರ್ಜಿತ'ವೆಂದು ಪರಿಗಣಿಸಬೇಕು ಎಂದು ಸಿಎಂ ಅತಿಶಿ ತಿಳಿಸಿದ್ದಾರೆ.
ಈ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ದೆಹಲಿ ವಕ್ಫ್ ಮಂಡಳಿಯ ನಿರ್ವಾಹಕರು ಐಎಎಸ್ ಅಶ್ವಿನಿ ಕುಮಾರ್ ಅವರು ದೆಹಲಿಯ ಸರ್ಕಾರದ ಅನುಮೋದನೆಯಿಲ್ಲದೆ ವರದಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಆ ವರದಿಯನ್ನು ಅನೂರ್ಜಿತ ಎಂದು ಪರಿಗಣಿಸಬಹುದು. ಅದರ ಬಗ್ಗೆ ಯಾವುದೇ ಪ್ರಸ್ತುತಿಯನ್ನು ಪರಿಗಣಿಸಬಾರದು ಎಂದು ಈ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇಂದು ನಡೆದ ಜೆಪಿಸಿ ಸಭೆಯಲ್ಲಿ ದೆಹಲಿ ವಕ್ಫ್ ಮಂಡಳಿಯ ವರದಿ ಕುರಿತಿ ವಿರೋಧ ವ್ಯಕ್ತವಾಗಿದ್ದು, ವರದಿಯನ್ನು ವಿರೋಧಿಸಿ ಹಲವು ವಿರೋಧ ಪಕ್ಷದ ನಾಯಕರು ಸಭೆಯಿಂದ ಹೊರನಡೆದಿದ್ದಾರೆ. ಎಎಪಿ ಸದಸ್ಯ ಸಂಜಯ್ ಸಿಂಗ್, ಡಿಎಂಕೆಯ ಮೊಹಮ್ಮದ್ ಅಬ್ದುಲ್ಲಾ, ಕಾಂಗ್ರೆಸ್ನ ನಾಸೀರ್ ಹುಸೇನ್ ಮತ್ತು ಮೊಹಮ್ಮದ್ ಜಾವೇದ್ ಸೇರಿದಂತೆ ಇತರರು ಸಭೆಯಿಂದ ಹೊರನಡೆದಿದ್ದಾರೆ.