ಬೆಂಗಳೂರು, ಜೂ 03 (Daijiworld News/SM): ಕೆಎಸ್ಆರ್ ಟಿಸಿ ಪ್ರಯಾಣ ದರ ಏರಿಕೆಯಾಗದ ಹಿನ್ನೆಲೆಯಲ್ಲಿ ಇದರ ಹೊರೆಯನ್ನು ಇದೀಗ ವಿದ್ಯಾರ್ಥಿಗಳ ಮೇಲೆ ಹೊರಿಸಲು ಇಲಾಖೆ ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಒದಗಿಸುವ ಬಸ್ ಪಾಸ್ ದರವನ್ನಾದರೂ ಹೆಚ್ಚಳ ಮಾಡುವಂತೆ ದುಂಬಾಲು ಬಿದ್ದಿರುವ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯ ರಿಯಾಯಿತಿ ಪಾಸಿನ ದರವನ್ನು ಕನಿಷ್ಟ 100 ರೂಪಾಯಿಗಳಿಗೆ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ನಿಗಮವು ಪ್ರಸ್ತಾವನೆ ಸಲ್ಲಿಸಿದೆ. ‘ಸೇವಾ ಶುಲ್ಕ’ದ ರೂಪದಲ್ಲಿ ಈ ದರವನ್ನು ವಸೂಲಿ ಮಾಡಲು ಉದ್ದೇಶಿಸಿದೆ. ಸಾಧ್ಯವಾದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಈ ಪರಿಷ್ಕೃತ ದರ ಜಾರಿಗೊಳಿಸಲು ಚಿಂತನೆ ನಡೆಸಿದೆ.
ಇನ್ನು ಕಳೆದ ಏಳೆಂಟು ವರ್ಷಗಳಿಂದ ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸಿನ ದರ ಹೆಚ್ಚಿಸಿಲ್ಲ. ಇತ್ತ ಪ್ರಯಾಣ ದರವನ್ನು ಕೂಡ ಏರಿಕೆ ಪ್ರಸ್ತಾವನೆಯೂ ಜಾರಿಗೆ ಬಂದಿಲ್ಲ. ಈ ಮಧ್ಯೆ ನಿಗಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ಪಾಸ್ ದರ ಪರಿಷ್ಕರಣೆಗೊಂಡಲ್ಲಿ ಆರ್ಥಿಕ ಚೇತರಿಕೆಯಾಗುವ ಸಾಧ್ಯತೆ ಇದೆ.