ಬೆಂಗಳೂರು, ಅ.29(DaijiworldNews/AA): ರಾಜ್ಯ ಸರಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಕಿಡಿ ಕಾರಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಲತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಆಸ್ತಿ ಎಂದು ಘೋಷಿಸಿದರೆ ರೈತರು ಬೀದಿಗೆ ಬಂದು ಏನು ಮಾಡಬೇಕು ಎಂದು ಪ್ರಶ್ನಿಸಿದರು. ನಾವಿದರ ವಿರುದ್ಧ ಹೋರಾಟ ಮಾಡುತ್ತೇವೆ. ರೈತರಿಗೆ ಧ್ವನಿಗೂಡಿಸುತ್ತೇವೆ. ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಟೀಕಿಸಿದರು.
ಈ ರೀತಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ, ಈ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಮಾಡುತ್ತ ಬರುತ್ತಿದೆ. ಅದೇನಿಟ್ಟಿನಲ್ಲಿ ಜಮೀರ್ ಅಹ್ಮದ್ ನೇತೃತ್ವದಲ್ಲಿ ಇವತ್ತು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿದೆ ಎಂದು ಆರೋಪಿಸಿದರು. ಅವರ ನೇತೃತ್ವದಲ್ಲೇ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ನಿನ್ನೆ ಸಚಿವರು 120 ಜನ ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ ಹೊಣೆಗಾರನೇ? ಅದಕ್ಕೆ ಬಿಜೆಪಿ ಕಾರಣವೇ ಎಂದು ಕೇಳಿದರು. ಇದನ್ನು ಬಿಜೆಪಿ ಗಟ್ಟಿಯಾಗಿ ತೆಗೆದುಕೊಳ್ಳದೆ ಇದ್ದರೆ ರಾಜ್ಯ ಸರಕಾರದ ಕ್ರಮದಿಂದ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಬೀದಿಗೆ ಬರಬೇಕಾಗುತ್ತಿತ್ತು ಎಂದು ವಿಶ್ಲೇಷಿಸಿದರು.
ಬಿಜೆಪಿ ರೈತರ ಜೊತೆ ದೃಢವಾಗಿ ನಿಲ್ಲಲಿದೆ...
ಕಾಂಗ್ರೆಸ್ಸಿನವರು ಈಗ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಹೋಗಿ ಮನವಿ ಕೊಡಲಿ. ಈ ರೀತಿ ಆಟವನ್ನು ಶುರು ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು. ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯರಾದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಬಿಜೆಪಿ ತಂಡ ಈಗಾಗಲೇ ಬಿಜಾಪುರ ತಲುಪಿದೆ. ಬಿಜಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ಕೊಟ್ಟು ರೈತರನ್ನು ಸಂಪರ್ಕಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಿದ್ದಾರೆ ಎಂದರು.
ಬಿಜೆಪಿ ವಿಚಾರ ಸ್ಪಷ್ಟವಾಗಿದೆ. ರಾಜ್ಯ ಸರಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ರೈತರ ಪರ ಇದೆ. ನಾವು ಅವರ ಜೊತೆಯಲ್ಲಿದ್ದೇವೆ. ರೈತರ ಈ ಸಮಸ್ಯೆ ಪರಿಹಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಕಾನೂನಿನ ಸಹಾಯ ಸೇರಿ ಯಾವುದೇ ರೀತಿಯ ಸಹಕಾರವನ್ನು ಬಿಜೆಪಿ ಕೊಡಲಿದ್ದು, ಅವರ ಜೊತೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಹೇಳಿದರು.