ಬೆಂಗಳೂರು, ಜೂನ್ 03(Daijiworld News/SM): 'ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹೆಸರಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನತೆಯ ಮುಂದೆ ಹೊಸ ನಾಟಕ ಆರಂಭಿಸಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, 'ಕುಮಾರಸ್ವಾಮಿ ಒಂದು ವರ್ಷದಿಂದ ವಿಧಾನಸೌಧದ ಬದಲು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲಿ ಜನಸಾಮಾನ್ಯರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಹಲವು ಬಾರಿ ಟೀಕಿಸಿದರೂ, ಪ್ರಶ್ನಿಸಿದರೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ' ಎಂದರು.
'ರಾಜ್ಯದಲ್ಲಿ ಒಂದು ವರ್ಷದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಯಾವುದೇ ಅಧಿಕಾರಿಯಾಗಲಿ ಹಾಗೂ ಸಚಿವರು, ಶಾಸಕರಾಗಲಿ ಬರ ಪೀಡಿತ ಪ್ರದೇಶಗಳ ಕಡೆ ತಲೆ ಹಾಕಿರಲಿಲ್ಲ' ಎಂದು ಆರೋಪಿಸಿದರು.
'ಮುಖ್ಯಮಂತ್ರಿಗಳು ಮೊದಲು ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡುವ ಅಗತ್ಯವಿದೆ. ಹಾಗೂ ಅಲ್ಲಿನ ಜನರ ಸಂಕಷ್ಟಕ್ಕೆ ನೆರವಾಗಬೇಕಿದೆ. ಜೂನ್ 5ರ ನಂತರ ನಾವೂ ಕೂಡಾ ಬರಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಲಿದ್ದೇವೆ ಎಂದರು.