ಬೆಂಗಳೂರು, ಜೂ03(Daijiworld News/SS): ನಡೆದಾಡುವ ದೇವರು ಎಂದು ಖ್ಯಾತರಾಗಿದ್ದ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಮರಣೋತ್ತರ ಭಾರತ ರತ್ನ ಗೌರವ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ 600 ವರ್ಷಗಳ ಪರಂಪರೆ ಇದೆ. 1941ರಿಂದ 2019ರ ವರೆಗೆ ಶ್ರೀ ಶಿವಕುಮಾರಸ್ವಾಮೀಜಿ ಅವರ ಉಸ್ತುವಾರಿಯಲ್ಲಿದ್ದ ಮಠ, ಸಾಮಾಜಿಕ ಸೇವೆಯಲ್ಲಿ ಮಾದರಿ ಎನಿಸುವ ಕಾರ್ಯಗಳನ್ನು ಮಾಡಿದೆ. ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀಗಳು ಸ್ಥಾಪಿಸಿದ ವಿದ್ಯಾಕೇಂದ್ರಗಳು ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ.
ಸಿದ್ಧಗಂಗ ಶ್ರೀಗಳು ತ್ರಿವಿಧ ದಾಸೋಹಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಿದ್ಧಗಂಗಾ ಶ್ರೀಗಳು ಸಮಾಜಕ್ಕೆ ಸಲ್ಲಿಸಿರುವ ಸೇವೆಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಲ್ಲುವುದು ಉಚಿತ. ಎಲ್ಲ ನಾಗರಿಕರು, ಸಂಘ - ಸಂಸ್ಥೆಗಳು, ರಾಜಕೀಯ ಪಕ್ಷಗಳ ಆಶಯವೂ ಅದೇ ಆಗಿದೆ.
ಆದ್ದರಿಂದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಲಿಂಗೈಕ್ಯ ಶಿವಕುಮಾರಸ್ವಾಮೀಜಿಗಳ ಹೆಸರನ್ನು ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.