ಬೆಂಗಳೂರು,ಜೂ04(DaijiworldNews/AZM):ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ ಎಂದು ಅನಿಸಿಕೊಂಡಿರುವ ರಾಮಲಿಂಗರೆಡ್ಡಿಯವರು ಪಕ್ಷ ಬಿಡಲು ತಯಾರಾಗಿ ನಿಂತಿದ್ದಾರೆ.
ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರೂ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಅಸಮಾಧಾನ ರಾಮಲಿಂಗಾ ರೆಡ್ಡಿ ಅವರಲ್ಲಿದೆ. ಜೂ.೩ರಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾದ ರಾಮಲಿಂಗಾರೆಡ್ಡಿ ಅವರು ತಮ್ಮ ಬೇಗುದಿಯನ್ನು ಹೊರಹಾಕಿದರೆನ್ನಲಾಗಿದೆ. ಅತೃಪ್ತ ಶಾಸಕರಿಗೆ ಮಂತ್ರಿಗಿರಿ ಕೊಟ್ಟು ತಮ್ಮಂಥ ನಿಷ್ಠಾವಂತ ವ್ಯಕ್ತಿಯನ್ನು ಕಡೆಗಣಿಸಿರುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದಿನೇಶ್ ಗುಂಡೂವ್ ಅವರ ಜೊತೆ ಮುಕ್ಕಾಲು ಗಂಟೆ ಮಾತುಕತೆ ನಡೆಸಿರುವ ರಾಮಲಿಂಗಾ ರೆಡ್ಡಿ ತಾನು ರಾಜೀನಾಮೆ ನೀಡುವುದಾಗಿ ತಿಳಿಸಿದರೆನ್ನಲಾಗಿದೆ.
ರಾಜೀನಾಮೆ ಕೊಡುತ್ತೇನೆಂದು ರಾಮಲಿಂಗಾ ರೆಡ್ಡಿ ನೇರವಾಗಿ ಹೇಳಿದಾಗ ದಿನೇಶ್ ಗುಂಡೂವ್ ಸ್ವಲ್ಪ ಗಲಿಬಿಲಿಗೊಂಡರೆನ್ನಲಾಗಿದೆ. ರಾಮಲಿಂಗರೆಡ್ಡಿ ಅವರನ್ನ ಸಮಾಧಾನಪಡಿಸಲು ದಿನೇಶ್ ಗುಂಡೂರಾವ್ ಸಾಕಷ್ಟು ಪ್ರಯತ್ನ ಮಾಡಿದರು. ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕೇವಲ ಇಬ್ಬರು ಪಕ್ಷೇತರರನ್ನು ಮಾತ್ರ ಸಚಿವರನ್ನಾಗಿ ಮಾಡುತ್ತೇವೆ. ಬೇರೆ ಯಾರಿಗೂ ಮಂತ್ರಿಗಿರಿ ಕೊಡುತ್ತಿಲ್ಲ. ತಾವು ಪಕ್ಷ ಬಿಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರು ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಯತ್ನಿಸಿದರು.
ಆದರೆ, ರಾಮಲಿಂಗಾರೆಡ್ಡಿ ಅವರು ಇದಕ್ಕೆ ಬಗ್ಗಿಲ್ಲ. ತಮ್ಮೊಂದಿಗೆ ಸಮಾಲೋಚನೆ ಮಾಡದೆಯೇ ಎಲ್ಲವನ್ನೂ ಮೊದಲೇ ನಿರ್ಧಾರ ಮಾಡಿ ನಂತರ ನಾಯಕರಿಗೆ ನಿರ್ಧಾರ ತಿಳಿಸುತ್ತೀರಿ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರೆನ್ನಲಾಗಿದೆ.