ಬೆಂಗಳೂರು,ಜೂ04(Daijiworld News/AZM):ಕಾಂಗ್ರೆಸ್ ನಾಯಕಿ ರೇಷ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೇಳಿರುವ ಹೇಳಿಕೆ ಇದೀಗ ಸಾರ್ವಜನಿಕರಲ್ಲಿ ಚರ್ಚೆಗೆ ಒಳಪಟ್ಟಿದೆ. ತನಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ. ತಾನು ರೇಷ್ಮಾರನ್ನು ಕೊಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಈ ಅರೆಸ್ಟ್ ಹಿಂದೆ ರಾಜಕೀಯದ ಕೈವಾಡವಿದೆ ಎಂದು ಅವರು ಹೇಳಿದ್ದಾರೆ.
ಬಂಧನಕ್ಕೂ ಮೊದಲು ತೌಫಿಕ ಹೇಳಿಕೆಯೊಂದನ್ನು ನೀಡಿದ್ದ. ಈ ವೇಳೆ ಆತ ಕೊಲೆಯಲ್ಲಿ ನನ್ನ ಪಾತ್ರ ಇಲ್ಲ ಎನ್ನುವ ವಿಚಾರವನ್ನು ಹೇಳಿದ್ದಾನೆ. “ಮೇ 17ರಂದು ರೇಷ್ಮಾ ಪಡೆಕನೂರ ಕೊಲೆ ನಡೆದ ದಿನ ನಾನು ಪ್ರಕಾಶ ಅಂಬೇಡ್ಕರ ಅವರ ಜೊತೆಯಲ್ಲಿ ಪ್ರಚಾರದಲ್ಲಿದ್ದೆ. ಈ ವಿಷಯ ಪೊಲೀಸರಿಗೂ ಗೊತ್ತಿದೆ,” ಎನ್ನುವ ಮೂಲಕ ತೌಫಿಕ್ ಅಚ್ಚರಿ ಮೂಡಿಸಿದ್ದಾನೆ.
ರಾಜಕೀಯ ದುರುದ್ದೇಶದಿಂದ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂಬುದು ತೌಫಿಕ್ ಆರೋಪ. “ಕೊಲೆ ನಡೆದ ದಿನ ನಾನೆಲ್ಲಿದ್ದೆ ಎಂಬುದು ಪೊಲೀಸರಿಗೂ ಗೊತ್ತಿದೆ ಎಂದಮೇಲೆ ನನ್ನನ್ನೇಕೆ ಬಂಧಿಸಿದ್ದಾರೆ? ಶೀಘ್ರವೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ನನ್ನನ್ನು ಬಂಧಿಸಿದ್ದರ ಹಿಂದೆ ರಾಜಕೀಯ ಷಡ್ಯಂತ್ರರವಿದೆ,” ಎಂದು ತೌಫೀಕ್ ಹೇಳಿದ್ದಾರೆ.ಇನ್ನು, ತೌಫಿಕ್ ಅಲ್ಲಾ ಹಾಗೂ ಭಾರತದ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ನಾನು ಬಿಡುಗಡೆ ಆಗುತ್ತೇನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ.
ಮೇ 17ರಂದು ರೇಷ್ಮಾ ಕೊಲೆ ನಡೆದಿದ್ದು, ವಿಜಯಪುರ ಜಿಲ್ಲೆಯ ಕೋಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ಮೃತದೇಹ ಪತ್ತೆಯಾಗಿತ್ತು.