ನವದೆಹಲಿ, ನ.01(DaijiworldNews/AK):ಕಾಂಗ್ರೆಸ್ ಪಕ್ಷವು ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ ಆದರೆ ಅವುಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂಬುವುದನ್ನು ಅರಿತುಕೊಂಡಿದೆ ಎಂದು ಪ್ರಧಾನಿ ನರೆಂದ್ರ ಮೋದಿ ವಾಗ್ದಾಳಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ವಿಚಾರವಾಗಿ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ವಾಸ್ತವಕ್ಕೆ ದೂರವಾದ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಜಾರಿಗೊಳಿಸುವುದು ಕಷ್ಟ ಅಥವಾ ಅಸಾಧ್ಯ ಎಂಬ ಸತ್ಯ ಕಾಂಗ್ರೆಸ್ಗೆ ಅರ್ಥವಾಗುತ್ತಿದೆ. ಪ್ರಚಾರದ ಮೇಲೆ ಪ್ರಚಾರ ಮಾಡಿಯೂ ನಕಲಿ ಭರವಸೆಗಳನ್ನು ಈಡೇರಿಸಲು ಎಂದಿಗೂ ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಾಗೇ ಈಗ, ಜನರ ಮುಂದೆ ಬೆತ್ತಲಾಗುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಭರವಸೆಗಳು ಈಡೇರಿಲ್ಲ, ಇದು ಜನರಿಗೆ ಮಾಡಿದ ಮಹಾ ಮೋಸ . ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಂತರಿಕ ರಾಜಕಾರಣದಲ್ಲಿ ನಿರತವಾಗಿದೆ. ಜೊತೆಗೆ ಅಭಿವೃದ್ಧಿಗೆ ಕಾಳಜಿ ತೋರಿಸುವ ಬದಲು ಲೂಟಿ ಮಾಡುತ್ತಿದೆ. ಅಷ್ಟೇ ಅಲ್ಲ, ಈಗಿರುವ ಯೋಜನೆಗಳನ್ನು ಹಿಂಪಡೆಯಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದೆ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕೆಲವು ಕಾಂಗ್ರೆಸ್ ಭತ್ಯೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಐದು ವರ್ಷವಾದರೂ ಜಾರಿಯಾಗಿರಲಿಲ್ಲ. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇಂತಹ ಹಲವಾರು ಉದಾಹರಣೆಗಳಿವೆ ಎಂದಿದ್ದಾರೆ.