ನವದೆಹಲಿ, ನ.02(DaijiworldNews/TA): ಇತ್ತೀಚೆಗೆ ಬಿಡುಗಡೆಯಾದ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಅಖಿಲ ಭಾರತ 239ನೇ ರ್ಯಾಂಕ್ ಪಡೆದ ಉತ್ತರ ಪ್ರದೇಶದ ಬುಲಂದ್ಶಹರ್ ಮೂಲದ ಪವನ್ ಕುಮಾರ್ ಯಶಸ್ಸಿನ ಕಥೆ ಇದು. ಮಣ್ಣಿನ ಮನೆಯಲ್ಲಿ ಬೆಳೆದು ಉತ್ತುಂಗದತ್ತ ಯಶಸ್ಸನ್ನು ಸಾಧಿಸಿದ ಬಡತನದಲ್ಲಿ ಬೆಳಗಿದ ಯಶಸ್ವಿ ಪಯಣ ಇದು.
ಪವನ್ ಬಾಲ್ಯದಿಂದಲೂ ಬಡತನದ ಕಷ್ಟದಲ್ಲಿ ಬೆಳೆದುಬಂದವರು. ಕುಟುಂಬದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಾ ಕಲ್ನಾರಿನ ಛಾವಣಿಯೊಂದಿಗೆ ಸಾಧಾರಣ ಮಣ್ಣಿನ ಮನೆಯಲ್ಲಿ ಬೆಳೆದ ಪವನ್ ಗೆ ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಐಎಎಸ್ ಅಧಿಕಾರಿಯಾಗಬೇಕು, ಸಮಾಜಕ್ಕೆ ಸೇವೆ ಮಾಡಬೇಕು ಎಂಬ ಒಂದೇ ಕನಸು ಇತ್ತು.
ಪವನ್ ಅವರು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಆದರೆ ಅವರು ಮೂರನೇ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಅಭಿಲಾಷೆಯಿಮದ ಪಟ್ಟುಹಿಡಿದು ಓದಲಾರಂಭಿಸಿದರು. ಬಳಿಕ ಮೂರನೇ ಬಾರಿಗೆ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ಸಫಲಾಗುತ್ತಾರೆ. ಪವನ್ ಅವರ ಸಾಧನೆಗೆ ಪೋಷಕರು ಹಾಗೂ ಸಹೋದರಿಯರು ಬೆಂಬಲ ನೀಡುತ್ತಾರೆ.
ಪವನ್ ಅವರು ಉತ್ಸಾಹ, ಕಠಿಣ ಪರಿಶ್ರಮ ಮತ್ತು ಬೆಂಬಲದೊಂದಿಗೆ, ಅಡೆತಡೆಗಳನ್ನು ಮೆಟ್ಟಿ ನಿಂತು ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಈ ಮೂಲಕ ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.