ಮಂಡ್ಯ, ನ.02(DaijiworldNews/AA): ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿರುವ ಕೆಆರ್ಎಸ್ ಅಣೆಕಟ್ಟಿನ 150 ಕ್ರಸ್ಟ್ ಗೇಟ್ಗಳನ್ನು ಇತ್ತೀಚೆಗೆ ಬದಲು ಮಾಡಲಾಗಿದೆ. ಇದೀಗ ಹಳೆಯ ಗೇಟ್ಗಳನ್ನು ರಾಜ್ಯ ಸರ್ಕಾರ ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕರ್ನಾಟಕ ಸರ್ಕಾರ 150 ಕ್ರಸ್ಟ್ ಗೇಟ್ಗಳನ್ನು ಕೇವಲ ಕೆ.ಜಿಗೆ 6ರೂ. ಯಂತೆ ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. 150 ಕ್ರಸ್ಟ್ ಗೇಟ್ಗಳ ಪೈಕಿ ಒಂದೊಂದು ಗೇಟ್ಗಳು ಸುಮಾರು 650 ಟನ್ ತೂಕ ತೂಗುತ್ತದೆ. ಇದೀಗ ಒಂದು ಕೆಜಿಗೆ 6 ರೂ.ನಂತೆ 36 ಗೇಟ್ಗಳನ್ನು 36 ಲಕ್ಷ ರೂ.ಗೆ ಮಾರಾಟ ಮಾಡುವ ಪ್ರಯತ್ನ ನಡೆದಿದೆ. ಆದರೆ ಈ 36 ಗೇಟ್ಗಳ ಮೌಲ್ಯ ಸುಮಾರು 3 ಕೋಟಿ ರೂ.ಗಳಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಗೇಟ್ಗಳನ್ನ ಕೇವಲ 36 ಲಕ್ಷ ರೂ.ಗೆ ಮಾರಾಟ ಮಾಡಲು ಜಲಸಂಪನ್ಮೂಲ ಇಲಾಖೆ ತಯಾರಿ ನಡೆಸಿದೆ. ಇಲಾಖೆ ಅಧಿಕಾರಿಗಳು ಪ್ರಭಾವಿಗಳೊಂದಿಗೆ ಶಾಮೀಲಾಗಿ ಕೆಜಿಗೆ 6 ರೂ.ನಂತೆ ಮಾರಾಟ ಮಾಡುವ ಯೋಜನೆ ಹಾಕಿದ್ದಾರೆ. ಗುಜರಿಯಲ್ಲಿ ಕೆಜಿಗೆ 40 ರೂ.ನಂತೆ ಹಳೇ ಕಬ್ಬಿಣ ಖರೀದಿ ಮಾಡುತ್ತಾರೆ. ಹೀಗಿದ್ದಾಗ ಸರ್ಕಾರ ಕೆಜಿಗೆ 6 ರೂ.ಗೆ ಯಾಕೆ ಮಾರಾಟ ಮಾಡಲು ಮುಂದಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಪ್ರಶ್ನಿಸಿದ್ದಾರೆ.
ಹಳೆಯ ಗೇಟ್ಗಳನ್ನು ಮಾರಾಟ ಮಾಡುವ ಬದಲು ಬೃಂದಾವನದ ವ್ಯಾಪ್ತಿಯಲ್ಲಿ ಒಂದು ಮ್ಯೂಸಿಯಂ ನಿರ್ಮಾಣ ಮಾಡಬೇಕು. ಆ ಮ್ಯೂಸಿಯಂನಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಿದ ಬಗೆ ಹಾಗೂ ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ವಿವರಿಸಬೇಕು. ಜೊತೆಗೆ ಈ 150 ಕ್ರಸ್ಟ್ಗಳನ್ನು ಅಲ್ಲಿಟ್ಟು, ಇಷ್ಟೊಂದು ಬೃಹತ್ ಗೇಟ್ಗಳನ್ನು ಯಂತ್ರಗಳ ಸಹಾಯವಿಲ್ಲದೇ ಹೇಗೆ ನಿರ್ಮಾಣ ಮಾಡಿದರು ಎಂಬುದನ್ನು ಜನರಿಗೆ ತೋರಿಸಬೇಕು. ಒಂದು ವೇಳೆ ವಿರೋಧದ ನಡೆವೆಯೇ ಗೇಟ್ಗಳನ್ನು ಮಾರಾಟ ಮಾಡಲು ಮುಂದಾದರೆ ರೈತ ಸಂಘ ಹೋರಾಟ ಮಾಡುವುದಾಗಿ ಕೆಂಪೂಗೌಡ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಇನ್ನು ಗೇಟ್ಗಳನ್ನು ಇಷ್ಟು ಕಡಿಮೆ ಬೆಲೆಗೆ ಮಾಡುತ್ತಿರುವ ಹಿನ್ನೆಲೆ 90 ವರ್ಷದ ಹಳೆಯ ಗೇಟ್ಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂ.ಗಳನ್ನ ಗುಳಂ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸ್ಥಳೀಯರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.