ನವದೆಹಲಿ,ನ.02(DaijiworldNews/TA): ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆನಡಾದ ಸಚಿವರೊಬ್ಬರು ಮಾಡಿರುವ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಭಾರತ ಶನಿವಾರ ಕೆನಡಾದ ಹೈಕಮಿಷನ್ ಪ್ರತಿನಿಧಿಯನ್ನು ಕರೆಸಿ ತೀವ್ರ ಆಕ್ಷೇಪಣೆ ಸಲ್ಲಿಸಿದೆ. ಆರೋಪಗಳ ಹಿನ್ನೆಲೆ ಕೆನಡಾದ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ನೀಡಿದೆ.
ನಮ್ಮ ಗೃಹ ಸಚಿವರ ಬಗ್ಗೆ ಕೆನಡಾ ಸಚಿವ ಡೇವಿಡ್ ಮಾರಿಸನ್ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಉಲ್ಲೇಖಗಳನ್ನು ಭಾರತ ಸರ್ಕಾರವು ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಅಭಿಯಾನದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾದ ಇಬ್ಬರು ಉನ್ನತ ಅಧಿಕಾರಿಗಳು ವಾಷಿಂಗ್ಟನ್ ಪೋಸ್ಟ್ಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಭಾರತವು ಶನಿವಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮನ್ಸ್ ಜಾರಿ ಮಾಡಿದೆ. ಆರೋಪಗಳನ್ನು "ಅಸಂಬದ್ಧ ಮತ್ತು ಆಧಾರರಹಿತ" ಎಂದು ಕರೆದಿದೆ.