ಬೆಂಗಳೂರು, ನ.03(DaijiworldNews/AK): ಜಗ್ಗೇಶ್ ನಟನೆಯ ಮಠ, ಎದ್ದೇಳು ಮಂಜುನಾಥ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನರಾಗಿದ್ದಾರೆ.50 ವರ್ಷ ವಯಸ್ಸಾಗಿರುವ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುರುಪ್ರಸಾದ್ ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಮಾತ್ರವಲ್ಲದೆ ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ. ಇದೀಗ ಏಕಾ-ಏಕಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಟಾಟಾ ನ್ಯೂ ಹಾವೆಲ್ ಅಪಾರ್ಟ್ಮೆಂಟ್ ನಲ್ಲಿ ಗುರುಪ್ರಸಾದ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುಪ್ರಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
‘ಮಠ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ನಿರ್ದೇಶಿಸಿದ ‘ಎದ್ದೇಳು ಮಂಜುನಾಥ’ ನಿರ್ದೇಶಿಸಿ ಭಾರಿ ಹಿಟ್ ಆಯ್ತು, ಅದಾದ ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದರು. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ‘ಎರಡನೇ ಸಲ’ ನಿರ್ದೇಶಿಸಿದರು.
‘ಎರಡನೇ ಸಲ’ ಸಿನಿಮಾ ಆದಮೇಲೆ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಗುರುಪ್ರಸಾದ್ ಇದೇ ವರ್ಷದಲ್ಲಿ ಜಗ್ಗೇಶ್ ಅವರೊಟ್ಟಿಗೆ ರಂಗನಾಯಕ’ ಸಿನಿಮಾ ಮಾಡಿದರು ಈ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಕೌಟುಂಬಿಕ ಕಲಹಗಳ ಕಾರಣದಿಂದಾಗಿ ಗುರುಪ್ರಸಾದ್ ಕೆಲ ತಿಂಗಳ ಹಿಂದಷ್ಟೆ ಅವರು ಎರಡನೇ ಮದುವೆ ಆಗಿದ್ದರು.