ಬೆಂಗಳೂರು, ಜೂ 4 Daijiworld News/MSP): ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪಟ್ನಾ ಎಕ್ಸ್ಪ್ರೆಸ್ ರೈಲಿನಲ್ಲಿ ದೊರೆತ ಗ್ರೆನೇಡ್ ಎಲ್ಲಿಂದ ಬಂತು ಎನ್ನುವುದನ್ನು ಶೋಧನೆ ಮಾಡುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗದ ವರದಿ ಪಡೆದ ಪೊಲೀಸರು, ಇದು ಸಾಮಾಜಘಾತುಕ ಚಟುವಟಿಕೆಗಳಿಗಾಗಿ ತಂದಿದ್ದ ಗ್ರೆನೇಡ್ ಅಲ್ಲ. ಬದಲಿಗೆ ಭಾರತೀಯ ಸೇನಾ ಪಡೆಗೆ ಸೇರಿದ ಗ್ರೆನೇಡ್. ಮೇ 30ರಂದು ಮಿಲಿಟರಿ ಯೋಧರ ತರಬೇತಿಗಾಗಿ ಕೊಂಡ್ಯೊಯ್ಯುತ್ತಿದ್ದಾಗ ಸೇನೆಯ ಒಂದು ಬಾಕ್ಸ್ ನಿಂದ ಗ್ರೆನೇಡ್ ಹಳಿ ಮೇಲೆ ಬಿದ್ದಿದೆ. ಬಿದ್ದ ಗ್ರೆನೇಡ್ ಅನ್ನು ಮಿಲಿಟರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಮನಿಸದೇ ಮುಂದೆ ಸಾಗಿದ್ದಾರೆ. ಪರಿಣಾಮ ಪ್ಲಾಟ್ ಫಾಮ್ ನಲ್ಲಿ ಈ ಗ್ರೆನೇಡ್ ದೊರೆತು ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿತ್ತು. ಇದೊಂದು ನಿರ್ಜೀವ ಗ್ರೆನೇಡ್ ಎಂದು ಸೇನೆಯ ಬಿಗ್ರೇಡ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮೇ 31ರಂದು ಬಿಹಾರಕ್ಕೆ ತೆರಳಬೇಕಿದ್ದ ಸಂಘಮಿತ್ರಾ ಪಾಟ್ನಾ ಎಕ್ಸ್ಪ್ರೆಸ್ ನ ಒಂದನೇ ಪ್ಲಾಟ್ ಫಾರ್ಮ್, ಎಸ್ 1 ಬೋಗಿಯಲ್ಲಿ ದೇಶೀಯ ಕೈ ಗ್ರೆನೇಡ್ ಪತ್ತೆಯಾಗಿದ್ದು, ಇದನ್ನು ಕಂಡ ಜನ ದಿಕ್ಕಾಪಾಲಾಗಿ ಓಡಿದ್ದರು. ಇದರಿಂದಾಗಿ ಕೆಲ ಗಂಟೆಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.