ಬೆಂಗಳೂರು, ನ.04(DaijiworldNews/AA): ವಕ್ಫ್ ನೊಟೀಸ್ ವಾಪಸ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಆದೇಶ ನೀಡಿದ್ದಾರೆ. ಆದಾಗ್ಯೂ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಗಳಲ್ಲಿ ಹೋರಾಟಕ್ಕೆ ಬಿಜೆಪಿಯು ಮುಂದಾಗಿದೆ. ಇದನ್ನು ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಸೂಚನೆ ಬಳಿಕವೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿರೋದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆ. ರೈತರ ಹಿತಾಸಕ್ತಿ ರಕ್ಷಣೆಯ ಸದುದ್ದೇಶ ಇಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇನ್ನು 1974ರಲ್ಲಿ ಸರ್ಕಾರ ಹೊರಡಿಸಿದ್ದ ಗೆಜೆಟ್ ನೊಟೀಫಿಕೇಶನ್ ರದ್ದು ಮಾಡಬೇಕು. ಈಗ ರೈತರಿಗೆ ಕೊಟ್ಟಿರೋ ನೊಟೀಸ್ ವಾಪಸ್ ಪಡೆಯಬೇಕು. ಇನ್ನು ಮುಂದೆ ಯಾವುದೇ ರೈತರಿಗೆ ನೊಟೀಸ್ ಕೊಡಬಾರದು. ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಅಂತ ನಮೂದು ಆಗಿರೋ ದಾಖಲಾತಿ ರೈತರ ಹೆಸರಿಗೆ ಮಾಡಿಕೊಡಬೇಕು. ನೊಟೀಸ್ ಕೊಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಆಗಬೇಕು ಮತ್ತು ರೈತರಿಗೆ ವಿರೋಧ ಆಗಿರೋ, ವಕ್ಫ್ ನೊಟೀಸ್ ಕೊಡಲು ಪ್ರೇರೇಪಿಸಿದ ಸಚಿವ ಜಮೀರ್ ತಲೆ ದಂಡ ಆಗಬೇಕು ಎಂಬೆಲ್ಲಾ ಹೋರಾಟದ ಬೇಡಿಕೆಯನ್ನು ಬಿಜೆಪಿ ಮುಂದಿಟ್ಟಿದೆ.