ಬೆಂಗಳೂರು, ನ.04(DaijiworldNews/AA): ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಬಿಜೆಪಿಯವರು ಬಡವರ ವಿರೋಧಿಗಳು ಗ್ಯಾರಂಟಿ ಯೋಜನೆ ಸಹಿಸುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಮೂರುವರೆ ವರ್ಷ ಎಲ್ಲಾ ಗ್ಯಾರಂಟಿ ಇದ್ದೇ ಇರುತ್ತದೆ. ಮುಂದೆ ಮತ್ತೆ ಚುನಾವಣೆ ಬರುತ್ತದೆ. ಆಗಲೂ ನಾವೇ ಗೆಲ್ಲುತ್ತೇವೆ. ಆಗಲೂ ಈ ಗ್ಯಾರಂಟಿ ಮುಂದುವರೆಯುತ್ತದೆ. ಬಿಜೆಪಿ ಬಡವರ ವಿರೋಧಿಗಳು. ಅವರು ಕೊಡೋದೂ ಇಲ್ಲ, ಕೊಟ್ಟವರನ್ನ ಸಹಿಸೋದು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಸಾಲ ಹೊರಿಸಿ ಹೋದವರು. ಎಲ್ಲಾ ಕಡೆ ಸಾವಿರಾರು ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಅಭಿವೃದ್ಧಿಗೆ ಮಾಡುವ ಖರ್ಚಿನ ಹಣ ಸೇರಿ ಎಲ್ಲಾ ಕಡೆ ಸಾಲ ಇಟ್ಟು ಹೋಗಿದ್ದಾರೆ. ಈಗ ನಮ್ಮ ಮೇಲೆ ಹೇಳುತ್ತಾರೆ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಿಂದ ಹಿಡಿದು ಎಲ್ಲಾ ನಾಯಕರು ಆರಾಮವಾಗಿ ಇದ್ದಾರೆ. ಮುಂದಿನ ಐದು ವರ್ಷ ಕೂಡ ಅವರು ಬಿಡುವಾಗಿ ಇರುತ್ತಾರೆ. ವಿಪಕ್ಷದಲ್ಲೇ ಕೂರುತ್ತಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಂದುವರೆದು ಈಗಾಗಲೇ ವಕ್ಫ್ ವಿಚಾರವಾಗಿ ಸಿಎಂ ಸ್ಪಷ್ಟನೆ ನೀಡಿದ್ದಾರೆ. ನೋಟಿಸ್ ಕೊಡಲು ಕಾರಣ ಯಾರು ಅಂದರೆ ಅದು ಬಿಜೆಪಿ ಅವರೇ. ಮಗು ಚಿವುಟೋದು ಅವರೇ, ತೊಟ್ಟಿಲು ತೂಗೋದು ಅವರೇ. ಅವರಿಂದಲೇ ನೋಟಿಸ್ ಕೊಟ್ಟಿದ್ದು ಅಲ್ವಾ. ಅದನ್ನು ಈಗ ನಾವು ನಿಲ್ಲಿಸುತ್ತಿದ್ದೇವೆ. ನಾವು ರೈತರ ಪರವಾಗಿ ಇದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.