ತಿರುವನಂತಪುರಂ,ಜೂ04(DaijiworldNews/AZM): ನಿಪಾಹ್ ವೈರಸ್ ಸಂಶಯದಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯಲ್ಲಿ ವೈರಸ್ ಇರುವುದು ದೃಢಪಟ್ಟಿದ್ದು, ಇದೀಗ ಕೇರಳದಲ್ಲಿ ನಿಪಾಹ್ ವೈರಸ್ ನ ಒಂದು ಪ್ರಕರಣ ಖಚಿತಗೊಂಡಿದೆ.
ಎರ್ನಾಕುಲಂ ನ 23 ವರ್ಷದ ವಿದ್ಯಾರ್ಥಿಯಲ್ಲಿ ನಿಪಾಹ್ ವೈರಸ್ ಪತ್ತೆಯಾಗಿದೆ.
ವಿದ್ಯಾರ್ಥಿ ತರಬೇತಿಗೆಂದು ಇಡುಕ್ಕಿಗೆ ಬಂದಿದ್ದು, ಮನೆಗೆ ವಾಪಸಾದ ಬಳಿಕ ತೀವ್ರ ಜ್ವರದಿಂದ ಬಳಲುತ್ತಿದ್ದ. ನಿಪಾಹ್ ವೈರಸ್ ಇರಬಹುದೇ ಎಂದು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಹೌದು ಅವರ ದೇಹದಲ್ಲಿ ನಿಪಾಹ್ ವೈರಸ್ ಇದೆ ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ದೃಢಪಡಿಸಿದ್ದಾರೆ.
ವೈರಲ್ ಇನ್ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ.