ನವದೆಹಲಿ, ನ.04(DaijiworldNews/AA): ಈ ಹಿಂದೆ ಸೌರ ಶಕ್ತಿ ಎಂಬುದು ಕನಸು ಮಾತ್ರವೇ ಆಗಿತ್ತು. ಈಗ ಅದು ವಾಸ್ತವ ಶಕ್ತಿಯಾಗಿದೆ. ಈ ವಿಶ್ವವು ಹೆಚ್ಚು ಸುಸ್ಥಿರ ಹಾಗೂ ಸ್ವಚ್ಛ ಹಾದಿಯಲ್ಲಿ ಸಾಗಲು ಸೌರಶಕ್ತಿ ನೆರವಾಗುತ್ತಿದೆ ಎಂದು ಕೇಂದ್ರ ಮರುಬಳಕೆ ಇಂಧನ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಇಂದು ಆಯೋಜಿಸಲಾದ ೭ನೇ ಅಂತಾರಾಷ್ಟ್ರೀಯ ಸೌರ ಮೈತ್ರಿ ಮಹಾಸಭೆಯ ಆರಂಭಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಾದ್ಯಂತ ನೀವು ಸೂರ್ಯನ ದೇವಸ್ಥಾನಗಳನ್ನು ಕಾಣುತ್ತೀರಿ. ನೀವೆಲ್ಲೇ ಹೋದರೂ ಈ ಸೂರ್ಯ ಇದ್ದೇ ಇರುತ್ತಾನೆ. ಭಾರತದ ಈ ಸಂಪ್ರದಾಯಗಳಿಂದ ನಾವೆಲ್ಲಾ ಪ್ರೇರಣೆ ಪಡೆಯುತ್ತಾ ಮುಂದಡಿ ಇಡೋಣ. ಸೌರ ಶಕ್ತಿಗೆ ಒತ್ತು ಕೊಡುವುದನ್ನು ಮುಂದುವರಿಸೋಣ. ನಮ್ಮ ಜೀವನ ಮಾರ್ಪಾಡಿಸಲು ಮತ್ತು ನಮ್ಮ ಭೂಮಿಯನ್ನು ರಕ್ಷಿಸಲು ಶಕ್ತಿ ಈ ಸೌರಶಕ್ತಿಗೆ ಇದೆ ಎನ್ನುವುದು ಎಲ್ಲರಿಗೂ ಅರಿವಿರಲಿ ಎಂದು ಕರೆ ನೀಡಿದ್ದಾರೆ.
ಜಾಗತಿಕವಾಗಿ ಸೌರ ಕ್ಷೇತ್ರದಲ್ಲಿ 2023ರಲ್ಲಿ 393 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು 500 ಬಿಲಿಯನ್ ಡಾಲರ್ಗೆ ಏರಲಿದೆ ಎಂದಿದ್ದಾರೆ. ಈ ಹೂಡಿಕೆಗಳಿಂದಾಗಿ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿರುವುದು ಮಾತ್ರವಲ್ಲ, ವೆಚ್ಚವೂ ಕಡಿಮೆ ಆಗುತ್ತಿದೆ ಎಂದು ಹೇಳಿದ್ದಾರೆ.