ಬೆಂಗಳೂರು, ನ.04(DaijiworldNews/AA): ಸಿದ್ದರಾಮಯ್ಯ ಇರುವವರೆಗೂ ಸಿಎಂ ಬದಲಾವಣೆಯ ಯಾವುದೇ ಮಾತು ಇಲ್ಲ. ಕಾಂಗ್ರೆಸ್ ಮುಂದೆ ಸಿಎಂ ಬದಲಾವಣೆ ವಿಷಯ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮುಂದುವರೆಯತ್ತಾರೆ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.
ಉಪಚುನಾವಣೆ ಫಲಿತಾಂಶ ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 136 ಸ್ಥಾನ ನಾವು ಇದ್ದೇವೆ. ಒಂದು ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಒಂದು ಸ್ಥಾನದಿಂದ ಸಿಎಂ ಸ್ಥಾನಕ್ಕೆ ಯಾಕೆ ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿ ಸ್ಥಾನ ಯಾಕೆ ಅಲ್ಲಾಡುತ್ತದೆ. ಕೋಳಿವಾಡ ಹೇಳಿಕೆ ಅವರ ವೈಯಕ್ತಿಕ. ಹರಿಯಾಣ ಸೋಲಿಗೆ ಬೇರೆ ಕಾರಣ ಇದೆ. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಮತ್ತು ನಿಖಿಲ್ ಕಣ್ಣೀರು ಹಾಕಿರೋ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ. ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್ಗಳು. ಹೀಗೆ ಅಳೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಾ ಮತಗಳ ಮೇಲೆ ಕಣ್ಣು ಇಟ್ಟಿರುತ್ತಾರೆ. ಆದರೆ ಜನ ಎಲ್ಲವನ್ನೂ ತೀರ್ಮಾನಿಸುತ್ತಾರೆ. ಏನು ಕೆಲಸ ಮಾಡುತ್ತಾರೆ ಏನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ ನೋಡಿ ಮತ ಹಾಕುತ್ತಾರೆ. ಚನ್ನಪಟ್ಟಣ ಕಾಂಗ್ರೆಸ್ ಪರ ಇದೆ. ಈಗ ವಾತಾವರಣ ಶುರುವಾಗಿದೆ ಎಂದು ಹೇಳಿದರು.