ವಿಜಯಪುರ, ನ.04(DaijiworldNews/AK): ವಕ್ಫ್ ಬೋರ್ಡ್ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ಉಳಿಸಿ ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವ್ ಆಗಬೇಕು. ಅಲ್ಲದೇ ವಕ್ಫ್ ಬೋರ್ಡ್ ನಿಂದ ರೈತರು, ಮಠ ಮಾನ್ಯಗಳಿಗೆ ನ್ಯಾಯ ಸಿಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಜಮೀರ್ ರಾಜ್ಯದ ಎಲ್ಲ ಭೂಮಿ ವಕ್ಫ್ ಅಡಿಯಲ್ಲಿ ತರಲು ಹೊರಟಿದ್ದಾರೆ. ರಾಜ್ಯದಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ಯಾವ ಕಾನೂನು ಅಡಿ ವಕ್ಫ್ ಅದಾಲತ್ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಲ್ಯಾಂಡ್ ಜಿಹಾದ್ಗೆ ಜಮೀರ್ ಮುಂದಾಗಿದ್ದಾರೆ ಇದನ್ನು ಸಹಿಸಲ್ಲ ನ್ಯಾಯ ಸಿಗುವವರಿಗೂ ನಮ್ಮ ಹೋರಾಟ ನಡೆಯಲಿದೆ. ರೈತರಿಗೆ ನೀಡಿದ್ದ ನೋಟಿಸ್ ರದ್ದು ಮಾಡಬೇಕು. ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಹೆಸರು ತೆಗೆಯಬೇಕು ಎಂದು ಆಗ್ರಹಿಸಿದರು.
1974ರ ಗೆಜೆಟ್ ನೊಟಿಫಿಕೇಷನ್ ಸಂಪೂರ್ಣ ರದ್ದಾಗಬೇಕು. ಇದು ರದ್ದಾಗುವವರೆಗೂ ಹೋರಾಟ ಮಾಡುತ್ತೇವೆ. ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆಯುವ ಅಹೋರಾತ್ರಿ ಧರಣಿಯಲ್ಲಿ ನಾನೂ ಭಾಗಿಯಾಗುವೆ. ರಾಜ್ಯದ ಹಲವಾರು ದೇವಸ್ಥಾನಗಳು ವಕ್ಪ್ ಎಂದಾಗಿವೆ. ಇದು ಯಾವ ಷಡ್ಯಂತ್ರ ಎಂದು ಕಿಡಿಕಾರಿದರು.