ನವದೆಹಲಿ, ನ.04(DaijiworldNews/AA): ಪಟಾಕಿ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂದು ದೆಹಲಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ದೀಪಾವಳಿ ಹಬ್ಬದ ನಂತರ ಕೆಲವು ದಿನಗಳ ಕಾಲ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಉಸಿರುಗಟ್ಟಿಸುವ ವಿಷಕಾರಿ ಗಾಳಿಯಿಂದ ತುಂಬಿದ್ದಕ್ಕೆ ಸುಪ್ರಿಂ ಕೋರ್ಟ್ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಕ್ರಮವನ್ನು ಪ್ರತಿ ವರ್ಷ ಘೋಷಿಸುವ ಮತ್ತು ನಿರ್ಲಕ್ಷಿಸುವ ವಿಚಾರದ ಬಗ್ಗೆ ಸರ್ಕಾರ ಮತ್ತು ಪೊಲೀಸರು ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಪಟಾಕಿಗಳ ನಿಷೇಧವನ್ನು ದೆಹಲಿ ಎನ್ಸಿಆರ್ನಲ್ಲಿ ಜಾರಿಗೆ ತರಲಾಗಿಲ್ಲ ಎಂದು ವ್ಯಾಪಕ ವರದಿಗಳಿವೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಕ್ರಮವಾಗಬೇಕಿತ್ತು ಎಂದು ನ್ಯಾ. ಅಭಯ್ ಎಸ್ ಓಕಾ ಮತ್ತು ನ್ಯಾ. ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ದ್ವಿಸದಸ್ಯ ಪೀಠ ತಿಳಿಸಿದೆ.