ಚನ್ನಪಟ್ಟಣ,ನ.04(DaijiworldNews/AK):ರಾಜ್ಯ ಸರ್ಕಾರ ವಕ್ಫ್ ವಿವಾದವನ್ನು ಬೇಗ ಸರಿಮಾಡದಿದ್ದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ರೈತರು ನುಗ್ಗುವ ದಿನಗಳು ದೂರವಿಲ್ಲ.ಜನರಲ್ಲಿ ಕ್ಷಮೆ ಕೇಳಿ ಸರಿಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ವಕ್ಫ್ ವಿವಾದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಬಾಂಗ್ಲಾದೇಶದ ಪ್ರಧಾನಿ ಮನೆಗೆ ಜನ ನುಗ್ಗಿದಂತೆ ರಾಜ್ಯಪಾಲರ ಮನೆಗೂ ಜನ ನುಗ್ಗುತ್ತಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ನ ಒಬ್ಬರು ಹೇಳಿದ್ದರು. ಅದೇ ಪರಿಸ್ಥಿತಿ ನಿಮಗೂ ಬಂದರೂ ಅಚ್ಚರಿ ಇಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದರು.
ವಿನಾಕಾರಣ ನನ್ನನ್ನು ವಿವಾದದಲ್ಲಿ ಎಳೆದು ತಂದರೆ ಎದುರಿಸಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಯಾದವರು ಸತ್ಯ ಹರಿಶ್ಚಂದ್ರನಂತೆ ಸತ್ಯಮೇವ ಜಯತೇ ಜಪ ಮಾಡುತ್ತಲೇ ದಿನವೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಕಾಂಗ್ರೆಸ್ ಸರ್ವನಾಶದ ಕಾಲ. ಅದನ್ನು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲೂ ವಕ್ಫ್ ತೀರ್ಮಾನ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಬೇಜವಾಬ್ದಾರಿತನದ್ದು. ನಾನು ಸಿ.ಎಂ ಆಗಿದ್ದಾಗ ನನ್ನ ಮುಂದೆ ಯಾವುದೇ ವಕ್ಫ್ ಕಡತ ಬಂದಿರಲಿಲ್ಲ. ರೈತರ ಭೂಮಿಯಾಗಲಿ, ಹಿಂದೂ ಮಠದ ಭೂಮಿಯಾಗಲಿ ಯಾವುದೇ ಕಡತ ನನ್ನ ಬಳಿ ಬಂದಿರಲಿಲ್ಲ.ಯಾವ ದೃಷ್ಟಿಯಿಂದ ಸಿದ್ದರಾಮಯ್ಯ ಹೇಳಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.