ಬೆಂಗಳೂರು, ಜೂ 4 Daijiworld News/MSP): ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್. ವಿಶ್ವನಾಥ್ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಜೆಡಿಎಸ್ ಮುಖಂಡರ ನಡೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಅವರು ರಾಜೀನಾಮೆ ಸಲ್ಲಿಸಬಹುದು ಎಂದು ಈ ಹಿಂದೆಯೇ ಸುದ್ದಿಯಾಗಿತ್ತು.
ತಮ್ಮ ರಾಜೀನಾಮೆ ಸಲ್ಲಿಕೆಯ ವಿಚಾರವನ್ನು ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮದ ಮುಂದೆ ಸ್ಪಷ್ಟಪಡಿಸಿದರು.
"ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಕೇವಲ ಹೆಸರಿಗೆ ಇದ್ದಂತಿತ್ತು. ಕಾಂಗ್ರೆಸ್ನ ನಾಯಕರ ವ್ಯಂಗ್ಯ ಭರಿತ ಹೇಳಿಕೆ ಅಹಿಂದ ಮತಗಳು ಚದುರಿಹೋಗಿ, ಜೆಡಿಎಸ್ಗೆ ಸೋಲು ಉಂಟು ಮಾಡಿತು. ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ರಾಜ್ಯಧ್ಯಕ್ಷನಾದ ನನಗೆ ಅಥವಾ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ನೀಡಲಿಲ್ಲ . ಈ ಎಲ್ಲ ಕಾರಣಗಳಿಂದ ನೊಂದು ರಾಜೀನಾಮೆ ನೀಡುತ್ತಿದ್ದೇನೆ" ಎಂದರು.
ಪಕ್ಷ ತೊರೆದು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಮುಂದೆ ನೇಮಕವಾವಾಗುವ ರಾಜ್ಯಾಧ್ಯಕ್ಷರ ಅನುಭವ, ವಿವೇಕ, ಸಂಪರ್ಕ ಇವನ್ನೆಲ್ಲಾ ಪಕ್ಷವು ಸಮರ್ಥವಾಗಿ ಮುನ್ನಡೆಸಲಿ ಎಂದು ಹಾರೈಸಿದರು.