ನವದೆಹಲಿ, ,ನ.06(DaijiworldNews/AK): ರಾಜ್ಯದಲ್ಲಿ ಬೆಂಬಲ ಬೆಲೆಯೊಂದಿಗೆ ಹೆಚ್ಚುವರಿ ಹೆಸರು ಕಾಳು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚುವರಿ ಖರೀದಿಗೆ ಅನುಮತಿ ನೀಡಿದೆ . ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಈಗಾಗಲೇ 22,215 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಸಿದೆ ಎಂದರು.
ರಾಜ್ಯದಲ್ಲಿ ಹೆಸರು ಕಾಳು ಹೆಚ್ಚುವರಿಯಾಗಿ ಬೆಳೆದಿರುವ ಹಿನ್ನೆಲೆ ಸರ್ಕಾರದಿಂದ ಖರೀದಿಗೆ ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆ 16,105 ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ಖರೀದಿಸಲು ಕೃಷಿ ಸಚಿವರ ಜೊತೆಗೆ ಮಾತುಕತೆ ನಡೆಸಲಾಗಿತ್ತು.
ಮನವಿ ಮೇರೆಗೆ ಕೃಷಿ ಸಚಿವಾಲಯವೂ ಅನುಮತಿ ನೀಡಿದ್ದು, ಸರ್ಕಾರದ ಈ ನಿರ್ಧಾರದಿಂದಾಗಿ ಈ ಬಾರಿ ಒಟ್ಟು 38,320 ಮೆಟ್ರಿಕ್ ಟನ್ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಗೆ ಅನುಮತಿ ನೀಡಿದಂತಾಗಲಿದೆ. ಶೀಘ್ರದಲ್ಲಿ ಎಫ್ಎಕ್ಯೂ ಗುಣಮಟ್ಟದಲ್ಲಿ ಕೇಂದ್ರದ ಸಂಸ್ಥೆಗಳು ಹೆಸರು ಕಾಳು ಖರೀದಿ ಮಾಡಲಿದೆ ಎಂದು ಹೇಳಿದರು.