ಬೆಂಗಳೂರು, ,ನ.06(DaijiworldNews/AK): ಲೋಕಾಯುಕ್ತ ತನಿಖೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ರಾಜಕೀಯ ದೊಂಬರಾಟ ಮಾಡಿ, ತಾನು ಸಾಚಾ ಎಂದು ತೋರಿಸಿಕೊಳ್ಳುವ ಪ್ರಯತ್ನ ಮುಖ್ಯಮಂತ್ರಿಗಳದು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಆಕ್ಷೇಪಿಸಿದರು.
ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ನಿಜಕ್ಕೂ ಪ್ರಾಮಾಣಿಕತೆ ಇದ್ದರೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಇದರಿಂದ ವಾಸ್ತವಿಕ ವಿಚಾರಗಳು ಹೊರಕ್ಕೆ ಬರಲು ಸಾಧ್ಯ ಎಂದು ನುಡಿದರು.
ಮುಖ್ಯಮಂತ್ರಿಗಳು ತಮ್ಮ ಜೀವನ ತೆರೆದ ಪುಸ್ತಕ ಎನ್ನುತ್ತಿದ್ದಾರೆ. ಲೋಕಾಯುಕ್ತದ ಬದಲಾಗಿ ತಮ್ಮ ಕುಟುಂಬದ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಪ್ರಾಮಾಣಿಕತೆಯನ್ನು ತೋರಿಸಲಿ ಎಂದು ಒತ್ತಾಯಿಸಿದರು.
ಉಪ ಚುನಾವಣೆ ಸಂಬಂಧ ಪ್ರಶ್ನಿಸಿದಾಗ, 3ಕ್ಕೆ 3 ಕ್ಷೇತ್ರಗಳನ್ನು ಎನ್ಡಿಎ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಉತ್ತರ ಕೊಟ್ಟರು.ಅಬಕಾರಿ ಇಲಾಖೆಯಲ್ಲಿ ಸಾವಿರಾರು ಕೋಟಿಯ ಹಗರಣ ನಡೆದಿದ್ದು, ಆ ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಅವರು ಒತ್ತಾಯಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಇಲಾಖೆಯಲ್ಲಿ ಅಧಿಕಾರಿ ಆತ್ಮಹತ್ಯೆ ಕುರಿತು ತನಿಖೆ ನಡೆದು ಸತ್ಯ ಹೊರಬರಲಿ; ಆಮೇಲೆ ಪ್ರತಿಕ್ರಿಯೆ ಕೊಡುವುದಾಗಿ ಹೇಳಿದರು.ರಾಜ್ಯದೆಲ್ಲೆಡೆ ವಕ್ಫ್ ಒತ್ತುವರಿ ನಡೆದಿದೆ. ಇದರ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ. ಅಲ್ಲದೇ, ಸಂಬಂಧಿತ ಸಚಿವ ರಾಜೀನಾಮೆ ಕೊಡಬೇಕು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.