ಬೆಂಗಳೂರು,ಜೂ04(DaijiworldNews/AZM):ಆಸ್ಪತ್ರ್ತೆಗಳು, ಪಾರಂಪರಿಕ ತಾಣ,ಧಾರ್ಮಿಕ ಸ್ಥಳಗಳು ಹಾಗೂ ಶಾಲೆಗಳಲ್ಲಿ ಮೊಬೈಲ್ ಟವರ್ ಗಳನ್ನು ಬೇಕಾಬಿಟ್ಟಿಯಾಗಿ ಅಳವಡಿಸುವುದನ್ನು ರಾಜ್ಯ ಸರಕಾರ ನಿಯಂತ್ರಿಸಿದ್ದು, ಈ ಕುರಿತು ಮಾರ್ಗಸೂಚಿಯೊಂದನ್ನು ಹೊರಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಕುರಿತು ಮಾತನಾಡಿದ ಅವರು, ಮೊಬೈಲ್ ಟವರ್ ಅಳವಡಿಕೆಗೆ ಸಂಬಂಧಪಟ್ಟಂತೆ ಅಳವಡಿಕೆ ಮಾಡುವ ವೇಳೆಯಲ್ಲಿ ಮಾರ್ಗಸೂಚಿ ಅನ್ವಯವಾಗುವಂತೆ ಟವರ್ ಸ್ಥಾಪನೆ ಮಾಡುವ ಜಾಗದ ಆಯಾ ಸ್ಥಳೀಯ ಸಂಸ್ಥೆಗಳಿಂದ ಸಂಬಂಧ ಪಟ್ಟ ಟೆಲಿಕಾಂ ಕಂಪನಿಗಳು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿಯನ್ನು ಕಾರ್ಪೊರೇಷನ್ಗಳಲ್ಲಿ ಆಯುಕ್ತರು, ಟೌನ್ ಮುನ್ಸಿಪಲ್ ಕೌನ್ಸಿಲ್ನಲ್ಲಿ ಸಿಒ, ಟೌನ್ ಪಂಚಾಯತ್ನಲ್ಲಿ ಪಿಡಿಒಗಳು ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ ಎಂದು ಹೇಳಿದರು.
ಇನ್ನು ಶಾಲೆ, ಆಸ್ಪತ್ರೆ, ದೇವಸ್ಥಾನ ಅಥವಾ ಧಾರ್ಮಿಕ ಕಟ್ಟಡಗಳಿಂದ 50 ಮೀಟರ್ ವ್ಯಾಪ್ತಿಯಲ್ಲಿ ಟವರ್ ಸ್ಥಾಪನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.