ಬೆಂಗಳೂರು, ನ.06(DaijiworldNews/AK): ಮುಖ್ಯಮಂತ್ರಿಗಳು ಆರೋಪಿ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಯಡಿಯೂರಪ್ಪನವರ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣಾ ಪ್ರಚಾರದ ಅಂಗವಾಗಿ ಇಂದು ರೋಡ್ ಶೋ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಕಳೆದ 30-40 ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿ ಬಡವರು, ರೈತರ ಪರವಾಗಿ ಧ್ವನಿ ಎತ್ತಿ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನೀಡಿದ್ದಾರೆ. ಯಡಿಯೂರಪ್ಪ ಅವರು ಸಿದ್ದರಾಮಯ್ಯರಂತೆ ಅದೃಷ್ಟದ ಮುಖ್ಯಮಂತ್ರಿಗಳಲ್ಲ; ಸಿದ್ದರಾಮಯ್ಯನವರು ಬಡವರು, ರೈತರ ಪರವಾಗಿ ಹೋರಾಟ ಮಾಡಿಲ್ಲ; ಚಳವಳಿ ಮಾಡಿದವರಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪನವರ ಸರಕಾರ ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯನವರ ಸರಕಾರ ಸ್ಥಗಿತಗೊಳಿಸಿದೆ. ಕಾಂಗ್ರೆಸ್ ಸರಕಾರ ಬಡವರ ವಿರೋಧಿ ಸರಕಾರ. ಕಾಂಗ್ರೆಸ್ ಪಕ್ಷದ್ದು ರೈತವಿರೋಧಿ ಸರಕಾರ. ಅಭಿವೃದ್ಧಿ ಶೂನ್ಯ ಸರಕಾರ ಇದು. ಈ ಸರಕಾರ ಬದುಕಿದ್ದೂ ಸತ್ತಂತಿದೆ. ಈ ಭ್ರಷ್ಟ ಸರಕಾರವನ್ನು ಎಷ್ಟು ಬೇಗ ಕಿತ್ತೆಸೆಯುತ್ತೇವೋ ಅಷ್ಟು ಒಳ್ಳೆಯದು ಎಂದು ತಿಳಿಸಿದರು.