ನವದೆಹಲಿ, ಜೂ 4 Daijiworld News/MSP): ಬಡವರನ್ನು ವಂಚನೆ ಮಾಡಿದಂತೆ ಅಲ್ಪಸಂಖ್ಯಾತರನ್ನೂ ವಂಚಿಸಲಾಗಿದೆ ಅವರ ಅಭಿವೃದ್ದಿಗೆ ಹೆಚ್ಚಿನ ಗಮನಹರಿಸುವುದು ಅಗತ್ಯವಿದೆ ಎಂಬ ಮೋದಿ ಹೇಳಿಕೆಗೆ ಮುಸ್ಲಿಂ ಸಮುದಾಯದ ಮುಖಂಡರ ಗುಂಪೊಂದು ಶ್ಲಾಘನೆ ವ್ಯಕ್ತಪಡಿಸಿದೆ. ಇದೇ ಗುಂಪು ಪ್ರಪಂಚದ ಮೂರನೇ ಬಹು ದೊಡ್ಡ ಅರ್ಥ ವ್ಯವಸ್ಥೆಯಾಗಿ ಭಾರತವನ್ನು ಕಟ್ಟುವ ಕನಸಿಗೆ ಬೆಂಬಲ ನೀಡುವುದಾಗಿ ಹೇಳಿದೆ.
ಪ್ರಧಾನಿ ಮೋದಿ ಅವರು ಮೇ 26ರಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಎನ್ಡಿಎ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತ, ಅಲ್ಪಸಂಖ್ಯಾತರೂ ಸೇರಿದಂತೆ ಕಡೆಗಣಿಸಲ್ಪಟ್ಟ ಎಲ್ಲ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಮಾತ್ರವಲ್ಲದೆ ಅಲ್ಪಸಂಖ್ಯಾತರ ಅಭಿವೃದ್ದಿಗೆ ನಾವು ಗಮನಹರಿಸಬೇಕಾಗಿದೆ. ಅವರ ಶಿಕ್ಷಣ, ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. "ಮತ ಬ್ಯಾಂಕ್ " ರಾಜಕಾರಣದಲ್ಲೇ ನಂಬಿಕೆ ಇಟ್ಟುಕೊಂಡವರು , ಅಲ್ಪಸಂಖ್ಯಾತರನ್ನು ಹೆದರಿಕೆಯಿಂದ ಬದುಕುವಂತೆ ಮಾಡಿದ್ದಾರೆ. ಈ ವಂಚನೆಯ ಜಾಲವನ್ನು ಈ ವರ್ಷ ಭೇದಿಸಬೇಕು. ಮತ್ತು ನಾವು ಅವರ ವಿಶ್ವಾಸ ಗಳಿಸಿಕೊಳ್ಳಬೇಕು ಎಂದಿದ್ದರು.
ಮೋದಿಯವರ ಈ ಪ್ರತಿಪಾದನೆಗೆ ಪ್ರಧಾನಿ ಕಚೇರಿಗೆ ಪತ್ರ ಬರೆದಿರುವ ಅಲ್ಪಸಂಖ್ಯಾತರ ಸಮುದಾಯ ಪ್ರಮುಖರು, ಸಂವಿಧಾನ ಹಾಗೂ ಕಾನೂನಿನ ಅಡಿಯಲ್ಲಿ ಅಲ್ಪಸಂಖ್ಯಾತರಿಗೂ ಸಮಾನ ರಕ್ಷಣೆ ಹಾಗೂ ವಿಶ್ವಾಸವೃದ್ಧಿ ಕ್ರಮಗಳನ್ನು ನಾವೆಲ್ಲಾರೂ ಸ್ವಾಗತ ಮಾಡುತ್ತೇವೆ ಅಲ್ಪಸಂಖ್ಯಾತರ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿರ್ದಿಷ್ಟವಾಗಿ ಎತ್ತಿ ತೋರಿಸಿದ್ದೀರಿ ಎಂದು ಹೇಳಿದ್ದಾರೆ.
ಈ ಪತ್ರಕ್ಕೆ ಅಲ್ಪಸಂಖ್ಯಾತ ಸಮುದಾಯದ ಅನೇಕ ಗಣ್ಯರು ಸಹಿ ಹಾಕಿದ್ದಾರೆ.