ಬೆಂಗಳೂರು, ನ.07(DaijiworldNews/AK): ರಾಜ್ಯ ಉಪ ಚುನಾವಣೆಯ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ 3 ಕ್ಷೇತ್ರಗಳಲ್ಲಿ ಬಳಸುವ ಪ್ರಯತ್ನದಲ್ಲಿರುವುದು ನಮ್ಮ ಗಮನಕ್ಕೆ ಬಂದಿದೆ. ಚುನಾವಣಾ ಕಮೀಷನರ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲವಾದರೆ, ಈ 3 ಉಪ ಚುನಾವಣೆಗಳು ನ್ಯಾಯಸಮ್ಮತ ಚುನಾವಣೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ 3 ಜನ ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕೆಂದು ಒತ್ತಾಯಿಸಿದರು.
ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.ನಿಗಾ ಇಲ್ಲದಿದ್ದರೆ, ಹಣದ ಪ್ರಭಾವದಿಂದ ಜನಸಾಮಾನ್ಯರ ತಲೆ ಹಾಳು ಮಾಡಿ ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ. ಇದಕ್ಕೆ ಬಿಜೆಪಿ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು, ಎನ್ಡಿಎ ಪ್ರಾಮಾಣಿಕ ಕಾರ್ಯಾಚರಣೆ ಮುಂದುವರಿಯಲಿದೆ. ಚುನಾವಣಾ ಆಯೋಗ ಒಂದುವೇಳೆ ಈ ಉಸ್ತುವಾರಿಗಳ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸದೆ ಇದ್ದಲ್ಲಿ, ಸಾಮಾನ್ಯ ಜನರ ಮೇಲೆ ಗಂಭೀರ ಪ್ರಭಾವ ಬೀರಬಹುದು ಎಂದು ಆತಂಕ ಸೂಚಿಸಿದರು.
ಕಾಂಗ್ರೆಸ್ ಪಕ್ಷದ ಚುನಾವಣೆ ಉಸ್ತುವಾರಿ ಪಡೆದವರ ಕುರಿತು ಸ್ವಲ್ಪಮಟ್ಟಿನ ಆತಂಕ ಇದೆ. ಸಂಡೂರಿನಲ್ಲಿ ಮೊನ್ನೆ ತಾನೇ ಜೈಲಿನಿಂದ ಹೊರಗೆ ಬಂದ ನಾಗೇಂದ್ರರ ಉಸ್ತುವಾರಿ ಇದೆ. ಇಡೀ ರಾಜ್ಯದಲ್ಲಿ ರೈತರ ಭೂಮಿಯನ್ನು ಕೊಳ್ಳೆ ಹೊಡೆಯಲು, ವಕ್ಫ್ಗೆ ಖಾತೆ ಬದಲಿಸಿ ಆಸ್ತಿ ನುಂಗಿ ನೀರು ಕುಡಿಯಲು ಹೊರಟ ಜಮೀರ್ ಶಿಗ್ಗಾಂವಿ ಉಸ್ತುವಾರಿ ಆಗಿದ್ದಾರೆ. ಚನ್ನಪಟ್ಟಣದಲ್ಲಿ ಸನ್ಮಾನ್ಯ ಡಿ.ಕೆ.ಶಿವಕುಮಾರರ ಚುನಾವಣಾ ಉಸ್ತುವಾರಿ ಇದೆ. ಕಾಂಗ್ರೆಸ್ಸಿಗೆ ಇದೊಂದು ಸವಾಲಿನ ಚುನಾವಣೆ ಎನಿಸಿದೆ ಎಂದು ವಿಶ್ಲೇಷಿಸಿದರು.
ಮುಡಾ ಹಗರಣದ ಆರೋಪಿ ಮುಖ್ಯಮಂತ್ರಿಯವರು ಲೋಕಾಯುಕ್ತದ ಮುಂದೆ ಹೋಗಿ ಎರಡು ಗಂಟೆಯಲ್ಲಿ ಹೊರಗೆ ಬಂದಿದ್ದಾರೆ. ಮತ್ತೆ ಇನ್ಯಾವಾಗ ಹೋಗಬೇಕೆಂಬ ಆಲೋಚನೆ, ಅದಕ್ಕೆ ಬೇಕಾದಂಥ ಹೊಂದಾಣಿಕೆ ಮಾಡುವ ಕಾರ್ಯಯೋಜನೆಯಲ್ಲಿದ್ದಾರೆ.