ಕೊಡಗು, ಜೂ 4 Daijiworld News/MSP): ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಕಂಡ ಅಪ್ಪ ಮಕ್ಕಳ ರಾಜ್ಯಭಾರದ ಪಕ್ಷದಲ್ಲಿ ಯಾರಿಗೂ ಇರಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಎ. ಮಂಜು ಹೇಳಿದ್ದಾರೆ. ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಈ ವಿಚಾರ ಹೇಳಿದ್ದಾರೆ. ಇದೇ ವೇಳೇ ಜೆಡಿಎಸ್ ಸೋಲಿನ ಹೊಣೆಹೊತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದು ಟಾಂಗ್ ನೀಡಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಅಧಿಕಾರವಿರಲಿ ಅಥವಾ ಇಲ್ಲದೆ ಇರಲಿ ಅದು ಅವರ ಕುಟುಂಬಕ್ಕೆ ಮಾತ್ರ ಸೀಮಿತ. ಅಪ್ಪ ಮಕ್ಕಳ ಪಕ್ಷದಲ್ಲಿ ನಿಜವಾದ ಅರ್ಹತೆ ಇರೋ ನಾಯಕರಿಗೆ ಅಧಿಕಾರ ನೀಡುವುದಿಲ್ಲ. ಇತ್ತ ಕಡೆ ಅಧಿಕಾರವೂ ಇಲ್ಲ ಅಧ್ಯಕ್ಷರ ಜವಬ್ದಾರಿಯೂ ಇಲ್ಲ ನೆಪ ಮಾತ್ರಕ್ಕಿರುವ ಹುದ್ದೆಯನ್ನು ನಿರ್ವಹಿಸಲು ಸಾಧ್ಯವಾಗದೆ ನೊಂದುಕೊಂಡು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಂಜು ಆರೋಪಿಸಿದರು.
ಜೆಡಿಎಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಅಪ್ಪ ಮಕ್ಕಳ ಜೊತೆ ಯಾರಿಗೂ ಇರಲು ಸಾಧ್ಯ ಆಗುವುದಿಲ್ಲ ಎಂದು ಕಿಡಿಕಾರಿದ್ದರು. ಮಾಜಿ ಸಚಿವ ಮಂಜು, ಈ ಹಿಂದೆ ಜೆಡಿಎಸ್ ನಲ್ಲಿ ಇದ್ದು ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿದ್ದಕ್ಕೆ ಆಕ್ರೋಶಗೊಂಡು ಪಕ್ಷ ತೊರೆದು ಬಿಜೆಪಿ ಸೇರಿ ಪ್ರಜ್ವಲ್ ವಿರುದ್ದ ಸ್ಪರ್ಧಿಸಿದ್ದರು.